ಬೆಂಗಳೂರು: ಚಲನಚಿತ್ರ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಗ್ರಾಫಿಕ್ಸ್ ಮತ್ತು ಅನಿಮೇಷನ್ ಬಳಕೆ ಹೆಚ್ಚಾಗಿದ್ದು, ಉದ್ಯೋಗಾವಕಾಶಗಳೂ ಸೃಷ್ಟಿಯಾಗಿವೆ ಎಂದು ಟೆಕ್ನಿಕಲರ್ ಕಂಪನಿಯ ಭಾರತದ ಮುಖ್ಯಸ್ಥ ಬಿರೇನ್ ಘೋಷ್ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದಾಗಿ ಕೌಶಲ ಹೊಂದಿರುವವರಿಗೆ ಬೇಡಿಕೆ ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗಾಗಿ ₹15 ಲಕ್ಷ ನೀಡಲಾಗುವುದು ಎಂದರು.
ಪತ್ರಕರ್ತೆ ಎಸ್.ಭಾಗೇಶ್ರೀ ಮಾತನಾಡಿ, ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ವಿವಿಧ ಮಾಧ್ಯಮಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸುತ್ತಿರುವ ಈ ದಿನಗಳಲ್ಲಿ ಮುದ್ರಣ ಮಾಧ್ಯಮ ಸಂಸ್ಥೆಗಳು ಕೂಡ ವೆಬ್‌ಸೈಟ್, ಚಾನಲ್‌ಗಳನ್ನು ಆರಂಭಿಸಿವೆ. ಹಾಗಾಗಿ, ವಿದ್ಯಾರ್ಥಿಗಳು ಕಾಲೇಜು ಹಂತದಲ್ಲೇ ಭಾಷೆ ಮತ್ತು ತಂತ್ರಜ್ಞಾನಗಳಲ್ಲಿ ನಿಪುಣರಾಗಬೇಕು ಎಂದು ಸಲಹೆ ನೀಡಿದರು.
ಕುಲಪತಿ ಪ್ರೊ.ಜಯಕರ ಎಸ್.ಎಂ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಶೇಕ್ ಲತೀಫ್, ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಂಯೋಜಕಿ ರಾಜೇಶ್ವರಿ.ಆರ್, ಸಹ ಪ್ರಾಧ್ಯಾಪಕರಾದ ವಾಹಿನಿ, ಟಿ.ಶ್ರೀಪತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.