ಬೆಂಗಳೂರು: ಕಂದು ಕೋಡಿನ–ಸಣ್ಣ ಕೊಂಬಿನ ಗೂಬೆ, ಇಂಡಿಯನ್, ಯುರೋಪಿಯನ್ ಮತ್ತು ನಿಕೋಬಾರ್ ಗೂಬೆ, ಏಷ್ಯಾದ ಪಟ್ಟಿ ಹಾಲಕ್ಕಿ, ಚುಕ್ಕಿ ಹಾಲಕ್ಕಿ, ಬೆಟ್ಟದ–ಹಿಮದ ಗೂಬೆ, ಅಂಡಮಾನ್‌ನ ಪಾಳು ಗುಮ್ಮ...
ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ‘ಗೂಬೆಗಳ ಮುಗ್ಧಲೋಕ’ವೊಂದು ತೆರೆದುಕೊಂಡಿತು. ಸಾಹಿತಿ ಪೂರ್ಣಚಂದ್ರತೇಜಸ್ವಿ ಅವರ 81ನೇ ಜನ್ಮದಿನದ ಪ್ರಯುಕ್ತ ಛಾಯಾಚಿತ್ರ, ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದೇಶ–ವಿದೇಶಗಳ ಛಾಯಾಗ್ರಾಹಕರು ಸೆರೆ ಹಿಡಿದಿರುವ ಗೂಬೆಗಳ ಚಿತ್ರಗಳು ಪ್ರದರ್ಶನದಲ್ಲಿ ಗಮನ ಸೆಳೆದವು.
‘ತೇಜಸ್ವಿ ಪರಿಸರ ಕಾಳಜಿ ಹೊಂದಿದ್ದ ಸಾಹಿತಿ. ಏಳು ವರ್ಷಗಳಿಂದ ಅವರ ಜನ್ಮದಿನ ನಿಮಿತ್ತ ಚಿತ್ರಕಲಾ ಪರಿಷತ್ತು ಪ್ರತಿ ವರ್ಷ, ಒಂದೊಂದು ಪ್ರಾಣಿ ಅಥವಾ ಪಕ್ಷಿಯ ಛಾಯಾಚಿತ್ರ ಪ್ರದರ್ಶನ ಮತ್ತು ಸಂವಾದ ಏರ್ಪಡಿಸುತ್ತಿದೆ. ಈ ಕಾರ್ಯಕ್ಕೆ ಹಲವು ಸಂಘ–ಸಂಸ್ಥೆಗಳು ಕೈಜೋಡಿಸಿವೆ’ ಎಂದು ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಹೇಳಿದರು.
‘ಕೆಲವೇ ವರ್ಷಗಳ ಹಿಂದೆ, ಪ್ರತಿ ಒಬ್ಬ ಮನುಷ್ಯನಿಗೆ ಏಳು ಮರಗಳು ಇದ್ದವು. ಈಗ, ಪ್ರತಿ 17 ಮಂದಿಗೆ ಒಂದೇ ಮರ ಇದೆ. ಒಬ್ಬ ಮನುಷ್ಯನಿಗೆ ಒಂದು ಮರ ಇರುವಂತಾದರೂ ನೋಡಿಕೊಳ್ಳಬೇಕು’ ಎಂದರು.
‘ಅರಣ್ಯ ಪ್ರದೇಶದಲ್ಲಿ ಶೇ 25ರಷ್ಟು ಬಿದಿರು, ಅರ್ಧದಷ್ಟು ಜಾಗದಲ್ಲಿ ಹಣ್ಣುಗಳ ಮರಗಳಿರುವಂತೆ ಮಾಡಬೇಕು. ಅಲ್ಲದೆ, ಕಾಡಿನಲ್ಲಿ ಪ್ರತಿ 2–3 ಕಿ.ಮೀ. ಅಂತರದಲ್ಲಿ ಕೆರೆಗಳ ನಿರ್ಮಾಣ ಮಾಡಬೇಕು. ಆಗ, ಆಹಾರ ಮತ್ತು ನೀರಿಗಾಗಿ ಪ್ರಾಣಿಗಳು ನಾಡಿನೊಳಗೆ ಬರುವುದು ತಪ್ಪುತ್ತದೆ’ ಎಂದು ಶಂಕರ್ ಹೇಳಿದರು.
‘ಖಾಲಿ ಇರುವ ಸರ್ಕಾರಿ ಪ್ರದೇಶಗಳಲ್ಲಿಯೂ ಮರಗಳನ್ನು ಬೆಳೆಸಿ, ಕೆರೆಗಳ ನಿರ್ಮಾಣ ಮಾಡಬೇಕು. ಇನ್ಫೊಸಿಸ್, ವಿಪ್ರೊದಂತಹ ಬೃಹತ್ ಕಂಪನಿಗಳಿಗೆ ನಗರದ ಹೊರವಲಯದಲ್ಲಿ ಸಾಕಷ್ಟು ಜಾಗವನ್ನು ನೀಡಲಾಗುತ್ತದೆ. ಇಂತಹ ಪ್ರದೇಶದಲ್ಲಿ ಶೇ 25ರಷ್ಟು ಪ್ರದೇಶವನ್ನು ಅರಣ್ಯವನ್ನಾಗಿ ಅಭಿವೃದ್ಧಿಪಡಿಸಲು
ಸೂಚಿಸಬೇಕು’ ಎಂದು ಸಲಹೆ ನೀಡಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ಕೆ. ಸುಧಾಕರ್, ‘ತೇಜಸ್ವಿಯವರ ಸ್ಮರಣೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ₹5 ಲಕ್ಷ ನೀಡಲಾಗುವುದು.ರಾಜ್ಯದಲ್ಲಿ ಹಂತ–ಹಂತವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.
ಸೆ. 15ರವರೆಗೆ ಈ ಛಾಯಾಚಿತ್ರ ಪ್ರದರ್ಶನ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.