ADVERTISEMENT

ಅತ್ಯಾಚಾರ: ತೆಲಂಗಾಣ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 16:34 IST
Last Updated 28 ಆಗಸ್ಟ್ 2023, 16:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆಯೊಡ್ಡಿರುವ ಆರೋಪದಡಿ ಕೆ. ಶಿವಕುಮಾರ್ ರೆಡ್ಡಿ ವಿರುದ್ಧ ನಗರದ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ನಗರದ ಹೋಟೆಲೊಂದರಲ್ಲಿ ನಡೆದಿರುವ ಘಟನೆ ಬಗ್ಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಕೆ. ಶಿವಕುಮಾರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯದಲ್ಲೇ ಅವರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಶಿವಕುಮಾರ್ ರೆಡ್ಡಿ, ತೆಲಂಗಾಣದ ಕಾಂಗ್ರೆಸ್ ಮುಖಂಡ. ನಾರಾಯಣ್ ಪೇಟ್ ಜಿಲ್ಲಾ ಘಟಕದ ಅಧ್ಯಕ್ಷ. 2018ರಲ್ಲಿ ತೆಲಂಗಾಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು’ ಎಂದು ತಿಳಿಸಿವೆ.

ADVERTISEMENT

ಕೃತ್ಯ ಎಸಗಿ ವಿಡಿಯೊ ಚಿತ್ರೀಕರಣ: ‘ಶಿವಕುಮಾರ್ ಹಾಗೂ ಮಹಿಳೆ ನಡುವೆ ಸ್ನೇಹ ಬೆಳೆದಿತ್ತು. ಮಹಿಳೆ ಜೊತೆ ಬೆಂಗಳೂರಿನ ಹೋಟೆಲೊಂದರ ಕೊಠಡಿಯಲ್ಲಿ ಶಿವಕುಮಾರ್ ಉಳಿದುಕೊಂಡಿದ್ದರು. ಇದೇ ಸಂದರ್ಭದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದರೆಂಬ ಆರೋಪವಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅತ್ಯಾಚಾರದ ವೇಳೆ ಮಹಿಳೆಯ ವಿಡಿಯೊಗಳನ್ನು ಆರೋಪಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಹೇಳಿ ಬೆದರಿಸುತ್ತಿದ್ದಾರೆ. ಇದರಿಂದ ನೊಂದ ಮಹಿಳೆ, ಠಾಣೆಗೆ ದೂರು ನೀಡಿದ್ದಾರೆ’ ಎಂದು ತಿಳಿಸಿವೆ.

‘ಅತ್ಯಾಚಾರ ಆರೋಪದಡಿ ಶಿವಕುಮಾರ್ ರೆಡ್ಡಿ ವಿರುದ್ಧ ತೆಲಂಗಾಣದ ಪಂಜಗುಟ್ಟ ಠಾಣೆಯಲ್ಲಿ 2020ರಲ್ಲೂ ಪ್ರಕರಣ ದಾಖಲಾಗಿತ್ತು. ಇದೀಗ, ಎರಡನೇ ಬಾರಿ ಎಫ್‌ಐಆರ್ ದಾಖಲಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.