ಬೆಂಗಳೂರು: ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಹಾಗೂ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲು ಸಹಕಾರಿಯಾದ ‘ಟೆಲಿ ಮನಸ್’ ಸಹಾಯವಾಣಿಯಡಿ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಈ ಸಹಾಯವಾಣಿಯನ್ನು ನಿರ್ವಹಣೆ ಮಾಡುತ್ತಿದ್ದು, ವಿವಿಧ ರೀತಿಯ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಉಚಿತವಾಗಿ ಸಮಾಲೋಚನೆ ನಡೆಸಲಾಗುತ್ತಿದೆ. ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯು (ಐಐಐಟಿ–ಬಿ) ಈ ಸಹಾಯವಾಣಿಗೆ ತಾಂತ್ರಿಕ ನೆರವು ಒದಗಿಸುತ್ತಿದೆ. ದೇಶದ ವಿವಿಧೆಡೆಯಿಂದ ಈ ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಐಐಐಟಿ–ಬಿ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಮಾನಸಿಕ ಯೋಗಕ್ಷೇಮ ಉತ್ತೇಜಿಸುವ ಮತ್ತು ಮಾನಸಿಕ ಆರೋಗ್ಯದ ಸುತ್ತಲಿನ ಮೂಢನಂಬಿಕೆ ಹೋಗಲಾಡಿಸುವ ಗುರಿ ಆ್ಯಪ್ ಅಭಿವೃದ್ಧಿಯ ಹಿಂದಿದೆ.
ಮಾನಸಿಕ ಆರೋಗ್ಯ ಸಮಸ್ಯೆ ಹಾಗೂ ಒತ್ತಡಕ್ಕೆ ಒಳಗಾದವರಿಗೆ ನೆರವಾಗಲು ನಿಮ್ಹಾನ್ಸ್ 2022ರಲ್ಲಿ ‘ಟೆಲಿ ಮನಸ್’ ಉಚಿತ ಸಹಾಯವಾಣಿ ‘14416’ ಪ್ರಾರಂಭಿಸಿತ್ತು. ಈ ಸಹಾಯವಾಣಿಗೆ ಈವರೆಗೆ 15 ಲಕ್ಷಕ್ಕೂ ಅಧಿಕ ಕರೆಗಳು ಬಂದಿವೆ. ವಾರದ ಎಲ್ಲ ದಿನಗಳು 24 ಗಂಟೆಗಳೂ ದೂರವಾಣಿ ಕರೆಗಳನ್ನು 20 ಭಾಷೆಗಳಲ್ಲಿ ಸ್ವೀಕರಿಸಲಾಗುತ್ತಿದೆ. ಆ್ಯಪ್‌ನಲ್ಲಿ ಕೂಡ ದೂರವಾಣಿ ಕರೆಯ ಆಯ್ಕೆ ನೀಡಲಾಗಿದೆ. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.
ಸಿದ್ಧ ಮಾಹಿತಿ ಲಭ್ಯ: ಆ್ಯಪ್‌ನಲ್ಲಿ ದೂರವಾಣಿ ಸಂಖ್ಯೆ, ಹೆಸರು ಹಾಗೂ ಅಗತ್ಯ ವಿವರವನ್ನು ನಮೂದಿಸಿದ ಬಳಿಕ ವಿವಿಧ ಆಯ್ಕೆಗಳು ತೆರೆದುಕೊಳ್ಳಲಿವೆ. ಮಾನಸಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದಂತೆ ಯೋಗ, ವ್ಯಾಯಾಮ, ಆಹಾರ ಪಥ್ಯ (ಡಯಟ್), ನಿದ್ದೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆಗಳು ದೊರೆಯಲಿವೆ. ಮಾನಸಿಕ ಸ್ವಾಸ್ಥ್ಯದ ಬಗ್ಗೆ ವಿವರಗಳೂ ಲಭ್ಯವಾಗಲಿವೆ. ಆರ್ಥಿಕ, ಕೌಟುಂಬಿಕ, ಪರೀಕ್ಷೆ ಸೇರಿ ವಿವಿಧ ರೀತಿಯ ಒತ್ತಡಗಳ ನಿರ್ವಹಣೆ ಬಗ್ಗೆಯೂ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಮಾನಸಿಕ ಅನಾರೋಗ್ಯದ ಲಕ್ಷಣಗಳು ಹಾಗೂ ಅವುಗಳನ್ನು ಗುರುತಿಸುವ ಬಗೆಯ ಮಾಹಿತಿಯನ್ನೂ ಆ್ಯಪ್ ಒಳಗೊಂಡಿದೆ. ಸ್ವಯಂ ಮೌಲ್ಯಮಾಪನ, ಮಿದುಳಿಗೆ ಸವಾಲೊಡ್ಡುವ ಆಟಗಳೂ ಸೇರಿ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾದ ವಿವಿಧ ಆಯ್ಕೆಗಳಿವೆ.
‘ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಈ ಆ್ಯಪ್ ನೆರವಾಗಲಿದೆ. ವಿವಿಧ ರೀತಿಯ ಮಾಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಸಿದ್ಧ ಪರಿಕರಗಳನ್ನು ಒದಗಿಸಲಾಗಿದ್ದು, ನಿಮ್ಹಾನ್ಸ್‌ನ ಆಪ್ತ ಸಮಾಲೋಚಕರೊಂದಿಗೆ ದೂರವಾಣಿ ಹಾಗೂ ವಿಡಿಯೊ ಕರೆಯ ಮೂಲಕ ಸಮಾಲೋಚನೆ ನಡೆಸುವ ಅವಕಾಶವನ್ನೂ ಒದಗಿಸಲಾಗಿದೆ’ ಎಂದು ಐಐಐಟಿ–ಬಿ ಇ-ಆರೋಗ್ಯ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಕೆ. ಶ್ರೀಕಾಂತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.