ಬೆಂಗಳೂರು: ಜನರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ‘ಟೆಲಿಗ್ರಾಂ’ ಗ್ರೂಪ್ ಮೂಲಕ ಮಾರುತ್ತಿರುವ ಜಾಲವನ್ನು ಸಿಐಡಿ ಪೊಲೀಸರು ಪತ್ತೆ ಮಾಡಿದ್ದು, ಅನುಮಾನಾಸ್ಪದ ಗ್ರೂಪ್‌ಗಳನ್ನು ನಿಷ್ಕ್ರಿಯಗೊಳಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.
ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜನರಿಂದ ದೋಚಿದ ಹಣವನ್ನು ವರ್ಗಾಯಿಸಿಕೊಳ್ಳಲು ವಂಚಕರು, ಅಮಾಯಕ ಜನರ ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದಾರೆ. ಇಂಥ ಖಾತೆಗಳ ವಿವರಗಳನ್ನು ವಂಚಕರು, ಸಾಮಾಜಿಕ ಮಾಧ್ಯಮ ಟೆಲಿಗ್ರಾಂ ಗ್ರೂಪ್ ಮೂಲಕ ಖರೀದಿ ಮಾಡುತ್ತಿರುವ ಸಂಗತಿ ವಿಚಾರಣೆಯಿಂದ ಗೊತ್ತಾಗಿದೆ.
‘ಫೆಡೆಕ್ಸ್ ಕೋರಿಯರ್, ಸಾಲದ ಆ್ಯಪ್, ಬೆತ್ತಲೆ ವಿಡಿಯೊ ಕರೆ ಮಾಡಿ ಬ್ಲ್ಯಾಕ್‌ಮೇಲ್, ಉಡುಗೊರೆ ಆಮಿಷ, ಮನೆಯಿಂದ ಕೆಲಸ ಸೇರಿ ವಿವಿಧ ಪ್ರಕಾರದ ಸೈಬರ್ ವಂಚನೆಗಳು ವರದಿಯಾಗುತ್ತಿವೆ. ಈ ಎಲ್ಲ ವಂಚನೆಗಳಿಗೂ ಅಮಾಯಕ ಜನರ ಬ್ಯಾಂಕ್ ಖಾತೆಗಳು ಬಳಕೆಯಾಗುತ್ತಿವೆ’ ಎಂದು ಸಿಐಡಿ ಮೂಲಗಳು ಹೇಳಿವೆ.
‘ಸೈಬರ್ ವಂಚನೆ ಪ್ರಕರಣವೊಂದರ ತನಿಖೆ ನಡೆಸುವಾಗ, ಹಣ ವರ್ಗಾವಣೆ ಆಗಿದ್ದ ಖಾತೆಗಳ ವಿವರ ಸಂಗ್ರಹಿಸಲಾಗಿತ್ತು. ಖಾತೆದಾರರನ್ನು ಸಂಪರ್ಕಿಸಿ, ವಿಚಾರಣೆಗೆ ಒಳಪಡಿಸಲಾಗಿತ್ತು. ಅವರು ಯಾವುದೇ ಖಾತೆ ತೆರೆದಿರಲಿಲ್ಲ ಹಾಗೂ ಯಾವುದೇ ವಹಿವಾಟು ನಡೆಸಿರಲಿಲ್ಲವೆಂಬುದು ಗೊತ್ತಾಯಿತು. ಅವಾಗಲೇ, ಬ್ಯಾಂಕ್ ಖಾತೆಗಳನ್ನು ತೆರೆದು ಮಾರಾಟ ಮಾಡುತ್ತಿರುವ ಜಾಲದ ಸುಳಿವು ಲಭ್ಯವಾಯಿತು’ ಎಂದು ಮೂಲಗಳು ತಿಳಿಸಿವೆ.
‘ರಾಜಸ್ಥಾನ, ಜಾರ್ಖಂಡ್, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿರುವ ವಂಚಕರು, ಸೈಬರ್ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇವರಿಗೆ ಬ್ಯಾಂಕ್ ಖಾತೆಗಳನ್ನು ಪೂರೈಕೆ ಮಾಡುವ ದೊಡ್ಡ ಜಾಲವೇ ದೇಶದಾದ್ಯಂತ ಕೆಲಸ ಮಾಡುತ್ತಿದೆ. ಜಾಲದ ಪೈಕಿ ಹಲವರು ಈಗಾಗಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ’ ಎಂದು ಹೇಳಿವೆ.
ಸಮೀಕ್ಷೆ ಹೆಸರಿನಲ್ಲಿ ದಾಖಲೆ ಸಂಗ್ರಹ: ‘ಗ್ರಾಮೀಣ ಪ್ರದೇಶ, ನಗರದ ಕೊಳೆಗೇರಿ ಪ್ರದೇಶ ಹಾಗೂ ಬಡವರು ಹೆಚ್ಚಿರುವ ಪ್ರದೇಶಗಳಲ್ಲಿ ಸುತ್ತಾಡುವ ಆರೋಪಿಗಳು, ಸಮೀಕ್ಷೆ ಹೆಸರಿನಲ್ಲಿ ಜನರಿಂದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಕೆಲವೆಡೆ ಜನರಿಗೆ ಹಣ ನೀಡಿ ದಾಖಲೆಗಳನ್ನು ಪಡೆಯುತ್ತಿದ್ದಾರೆ. ಕೆಲವರು, ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ದಾಖಲೆಗಳನ್ನು ಗೂಗಲ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.
‘ಜನರ ದಾಖಲೆಗಳನ್ನು ಸಂಗ್ರಹಿಸುವ ಆರೋಪಿಗಳು, ಅದೇ ದಾಖಲೆ ಬಳಸಿಕೊಂಡು ಆನ್‌ಲೈನ್ ಮೂಲಕ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುತ್ತಿದ್ದಾರೆ. ಜೊತೆಗೆ, ನಕಲಿ ದಾಖಲೆ ಬಳಸಿ ಖರೀದಿಸುವ ಮೊಬೈಲ್ ಸಂಖ್ಯೆಯನ್ನು ಖಾತೆಗೆ ಜೋಡಣೆ ಮಾಡುತ್ತಿದ್ದಾರೆ. ಖಾತೆ ವಹಿವಾಟು ಅದೇ ಮೊಬೈಲ್ ಸಂಖ್ಯೆ ಮೂಲಕ ನಡೆಯುತ್ತಿದೆ. ಖಾತೆ ತೆರೆಯಲೆಂದೇ ಪ್ರತ್ಯೇಕ ಏಜೆಂಟರು ಕೆಲಸ ಮಾಡುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.
ಒಂದು ಖಾತೆಗೆ ₹ 10 ಸಾವಿರ-₹ 25 ಸಾವಿರ: ‘ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿರುವ ಆರೋಪಿಗಳು, ಟೆಲಿಗ್ರಾಂ ಆ್ಯಪ್‌ನಲ್ಲಿ ತಮ್ಮದೇ ಗ್ರೂಪ್ ಸೃಷ್ಟಿಸಿದ್ದಾರೆ. ‘ಖಾತೆಗಳು ಮಾರಾಟಕ್ಕಿವೆ’ ಎಂಬುದಾಗಿ ಜಾಹೀರಾತು ನೀಡುತ್ತಿದ್ದಾರೆ. ಒಂದು ಖಾತೆ ವಿವರವನ್ನು ₹ 10 ಸಾವಿರದಿಂದ ₹ 25 ಸಾವಿರಕ್ಕೆ ಮಾರುತ್ತಿದ್ದಾರೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.
‘ಖಾತೆಗಳನ್ನು ಮಾರಾಟ ಮಾಡುವ 25ಕ್ಕೂ ಹೆಚ್ಚು ಗ್ರೂಪ್‌ಗಳನ್ನು ಪತ್ತೆ ಮಾಡಲಾಗಿದೆ. ಇಂಥ ಗ್ರೂಪ್‌ಗಳನ್ನು ನಿಷ್ಕ್ರಿಯಗೊಳಿಸುವಂತೆ ಟೆಲಿಗ್ರಾಂ ಕಂಪನಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆಲ ಗ್ರೂಪ್‌ಗಳನ್ನು ನಿಷ್ಕ್ರಿಯಗೊಂಡಿವೆ’ ಎಂದು ಹೇಳಿವೆ.
‘ಬ್ಯಾಂಕ್ ಖಾತೆ ವಹಿವಾಟು ಸ್ಥಗಿತ’
‘ಜನರಿಂದ ದೂರುಗಳು ಬಂದಾಗ, ಸೈಬರ್ ವಂಚನೆಗೆ ಬಳಕೆಯಾಗುವ ಬ್ಯಾಂಕ್ ಖಾತೆಗಳ ವಹಿವಾಟು ಸ್ಥಗಿತಗೊಳಿಸಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.
‘ಜನರು ತಮ್ಮ ಹೆಸರಿನಲ್ಲಿ ಯಾವುದಾದರೂ ಅನುಮಾನಾಸ್ಪದ ಖಾತೆ ಇದ್ದರೆ ಹಾಗೂ ಅದರ ಮೂಲಕ ವಹಿವಾಟು ನಡೆಯುತ್ತಿದ್ದರೆ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜೊತೆಗೆ, ಪೊಲೀಸ್ ಠಾಣೆಗೆ ದೂರು ನೀಡಬಹುದು’ ಎಂದು ಹೇಳಿವೆ.
‘ಸಿಮ್‌ಕಾರ್ಡ್ ಮಾರಾಟಕ್ಕೂ ಏಜೆಂಟರು’
‘ನಕಲಿ ದಾಖಲೆ ಬಳಸಿ ಸಿಮ್ ಖರೀದಿಸಿ ಸೈಬರ್ ವಂಚಕರಿಗೆ ಮಾರುವ ಏಜೆಂಟರಿದ್ದಾರೆ. ಜೆರಾಕ್ಸ್ ಮಳಿಗೆ ಹಾಗೂ ಇತರೆಡೆ ಜನರ ದಾಖಲೆ ಸಂಗ್ರಹಿಸ ಲಾಗುತ್ತಿದೆ. ಜೊತೆಗೆ, ಗೂಗಲ್‌ನಲ್ಲಿ ಹುಡುಕಾಡಿ ಡೌನ್‌ಲೋಡ್ ಮಾಡಿಕೊಳ್ಳ ಲಾಗುತ್ತಿದೆ. ಇದೇ ದಾಖಲೆಗಳನ್ನು ಮೊಬೈಲ್ ಸೇವಾ ಕಂಪನಿಗಳಿಗೆ ನೀಡಿ ಹೊಸ ಸಿಮ್ ಪಡೆಯಲಾಗುತ್ತಿದೆ. ಇಂಥ ಸಿಮ್‌ಗಳನ್ನು ಸೈಬರ್ ವಂಚನೆಗೆ ಬಳಸಲಾಗುತ್ತಿದೆ. ಸಿಮ್ ಸುಳಿವು ಆಧರಿಸಿ ತನಿಖೆ ನಡೆಸಿದಾಗ, ಅಮಾಯಕರು ಸಿಕ್ಕಿಬೀಳುತ್ತಿದ್ದಾರೆ’ ಎಂದು ’ ಎಂದು ಸಿಐಡಿ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.