ADVERTISEMENT

ರೇವ್ ಪಾರ್ಟಿ: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ತೆಲುಗು ನಟಿ ಹೇಮಾ

​ಪ್ರಜಾವಾಣಿ ವಾರ್ತೆ
Published 27 ಮೇ 2024, 14:37 IST
Last Updated 27 ಮೇ 2024, 14:37 IST
<div class="paragraphs"><p>ಹೇಮಾ</p></div>

ಹೇಮಾ

   

ಬೆಂಗಳೂರು: ಹೆಬ್ಬಗೋಡಿ ಬಳಿಯ ಹುಸ್ಕೂರು ಸಮೀಪದಲ್ಲಿರುವ ಜಿ.ಆರ್. ಫಾರ್ಮ್‌ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ ತೆಲುಗು ಸಿನಿಮಾ ನಟಿ ಹೇಮಾ ಹಾಗೂ ಇತರರು ಸಿಸಿಬಿ ಪೊಲೀಸರಿಗೆ ಪತ್ರ ಬರೆದಿದ್ದಾರೆ.

‘ಸನ್‌ಸೆಟ್‌ ಟು ಸನ್‌ರೈಸ್ ವಿಕ್ಟರಿ’ ಹೆಸರಿನಲ್ಲಿ ಮೇ 19ರಂದು ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ನಟಿ ಹೇಮಾ ಹಾಗೂ ಇತರರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಹೇಮಾ ಹಾಗೂ ಇತರರು, ‘ಏಳು ದಿನಗಳ ಬಳಿಕ ವಿಚಾರಣೆಗೆ ಹಾಜರಾಗುತ್ತೇವೆ’ ಎಂದು ಹೇಳಿದ್ದಾರೆಂದು ಗೊತ್ತಾಗಿದೆ.

ADVERTISEMENT

‘ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 103 ಮಂದಿ ಪೈಕಿ, ನಟಿ ಹೇಮಾ ಸೇರಿದಂತೆ 86 ಮಂದಿ ಡ್ರಗ್ಸ್ ತೆಗೆದುಕೊಂಡಿದ್ದರು ಎಂಬುದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದೆ. ಹೀಗಾಗಿ, ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಪಾರ್ಟಿ ಆಯೋಜಿಸಿದ್ದ ಹಾಗೂ ಪಾರ್ಟಿಗೆ ಡ್ರಗ್ಸ್ ಪೂರೈಸಿದ್ದ ಐವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇವರ ಬಳಿ ₹ 50 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿದೆ. ಇವರೆಲ್ಲರೂ ಡ್ರಗ್ಸ್ ಮಾರಾಟ, ಕ್ರಿಕೆಟ್ ಬೆಟ್ಟಿಂಗ್ ಹಾಗೂ ಇತರೆ ದಂಧೆಗಳಲ್ಲಿ ತೊಡಗಿರುವ ಮಾಹಿತಿ ಇದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ನಟಿ ಹೇಮಾ ಹಾಗೂ ಇತರರು, ಕಾಲಾವಕಾಶ ಕೋರಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿವೆ.

ಒತ್ತಡ ಹೇರಿದವರ ವಿರುದ್ಧ ಕ್ರಮ: ‘ರೇವ್ ಪಾರ್ಟಿ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಹಲವರು ಒತ್ತಡ ಹಾಕುತ್ತಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಯಾರೇ ಒತ್ತಡ ಹಾಕಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.