ADVERTISEMENT

ಜಿಎಸ್‌ಟಿ ಹೊರತುಪಡಿಸಿ ಕಾಮಗಾರಿಗಳಿಗೆ ಟೆಂಡರ್‌: ಸರ್ಕಾರ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 15:56 IST
Last Updated 13 ಆಗಸ್ಟ್ 2024, 15:56 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಜಿಎಸ್‌ಟಿ ಹೊರತುಪಡಿಸಿ ಕಾಮಗಾರಿಗಳಿಗೆ ಟೆಂಡರ್‌ ಕರೆಯಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದಿಂದ ಅನುಮೋದಿಸಲಾದ ಏಕರೂಪ ಅನುಸೂಚಿ ದರಗಳ ಅನ್ವಯ, ಅಂದಾಜು ಪಟ್ಟಿಯಲ್ಲಿ ಜಿಎಸ್‌ಟಿ ಮೊತ್ತವನ್ನು ಹೊರತುಪಡಿಸಿ ಟೆಂಡರ್‌ ಆಹ್ವಾನಿಸಬೇಕು ಎಂದು ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಸುತ್ತೋಲೆ ಹೊರಡಿಸಿದ್ದಾರೆ.

ADVERTISEMENT

ಗುತ್ತಿಗೆದಾರರು ಟೆಂಡರ್‌ಗಿಟ್ಟ ಮೊತ್ತಕ್ಕೆ ಜಿಎಸ್‌ಟಿ ಹೊರತುಪಡಿಸಿ ದರಗಳನ್ನು ತುಲನೆ ಮಾಡಿ ಎಲ್‌– 1 ಟೆಂಡರ್‌ದಾರರನ್ನು ನಿರ್ಧರಿಸಲು ತಂತ್ರಾಂಶದಲ್ಲಿ ಕ್ರಮ ವಹಿಸಬೇಕು. ಟೆಂಡರ್‌ಗಿಟ್ಟ ಮೊತ್ತಕ್ಕೆ ಮಾತ್ರ ಇಎಂಡಿ, ಖಾತರಿ/ಭದ್ರತೆಗಳನ್ನು ಪಡೆಯಬೇಕು. ಟೆಂಡರ್‌ಗಿಟ್ಟ ಮೊತ್ತ ಹಾಗೂ ಜಿಎಸ್‌ಟಿ ಮೊತ್ತ ಸೇರಿದಂತೆ ಒಟ್ಟಾರೆ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಬೇಕು ಎಂದು ರಾಜ್ಯದ ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಇದಲ್ಲದೆ, ಜಿಎಸ್‌ಟಿ ವ್ಯತ್ಯಾಸ ಮೊತ್ತವನ್ನು ಸರ್ಕಾರದ ವತಿಯಿಂದ ಪಾವತಿಸಲು ಸುತ್ತೋಲೆ ಹೊರಡಿಸಲಾಗಿದೆ. ಮುಂದಿನ ಕಾಮಗಾರಿಗಳಿಗೆ, ಪರಿಷ್ಕರಣೆಯಾದಂತೆ ಜಿಎಸ್‌ಟಿ ಪಾವತಿಸಲು ಸರ್ಕಾರ ಮತ್ತು ಗುತ್ತಿಗೆದಾರರು ಬದ್ಧರಾಗಿರುತ್ತಾರೆ ಎಂಬ ಅಂಶವನ್ನು ಸೇರಿಸಿ ಪೂರಕ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. 

ಶೇ 12ರಷ್ಟು ಜಿಎಸ್‌ಟಿಗೆ ಕಾರ್ಯಾದೇಶ ನೀಡಲಾಯಿತು. 2017ರಿಂದ ಜಿಎಸ್‌ಟಿ ಶೇ 18ಕ್ಕೆ ಹೆಚ್ಚಾಯಿತು. ಶೇ 6ರಷ್ಟು ಹೆಚ್ಚುವರಿ ಜಿಎಸ್‌ಟಿಯನ್ನು ಗುತ್ತಿಗೆದಾರರು ಪಾವತಿಸಬೇಕಾಗಿತ್ತು. ಅದಕ್ಕೆ, ಈಗ ವಿನಾಯಿತಿ ನೀಡಲಾಗಿದೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ನೇತೃತ್ವದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿದ ನಂತರ, ಜಿಎಸ್‌ಟಿ ಮೊತ್ತ ಸೇರಿಸಿ ಟೆಂಡರ್‌ ಕರೆಯುವುದನ್ನು ರದ್ದುಪಡಿಸಲು ಆರ್ಥಿಕ ಇಲಾಖೆಗೆ ನಿರ್ದೇಶಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್‌ 3ರಂದು ಭರವಸೆ ನೀಡಿದ್ದರು.

‘2017–18ರ  ಹೆಚ್ಚುವರಿ ಜಿಎಸ್‌ಟಿಯನ್ನು ಸರ್ಕಾರದ ವತಿಯಿಂದ ಪಾವತಿಸಬೇಕೆಂಬ ನಮ್ಮ ಮನವಿಗೂ ಸ್ಪಂದನ ದೊರೆತಿದೆ. ನಮ್ಮ ಹಲವು ವರ್ಷಗಳ ಬೇಡಿಕೆಗೆ ಈಡೇರಿದೆ’ ಎಂದು  ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.