ಬೆಂಗಳೂರು: ‘ಟೆಂಡರ್‌ಶ್ಯೂರ್ ಯೋಜನೆಯಡಿ ನಗರದ 23 ರಸ್ತೆಗಳ ಕಾಮಗಾರಿಗಳಿಗೆ ಕೂಡಲೇ ಟೆಂಡರ್ ಕರೆದು, ಮಳೆ ನಿಂತ ನಂತರ ಕೆಲಸ ಆರಂಭಿಸಬೇಕು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಶನಿವಾರ ಟೆಂಡರ್‌ಶ್ಯೂರ್ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
‘ಮೊದಲ ಹಂತದ ಯೋಜನೆಯ ಸಿದ್ಧಯ್ಯ ಪುರಾಣಿಕ್ ರಸ್ತೆ ಕಾಮಗಾರಿಯಷ್ಟೇ ಬಾಕಿ ಇದೆ. ಅದು ಸದ್ಯದಲ್ಲಿ ಪೂರ್ಣಗೊಳ್ಳಲಿದೆ. ಎರಡನೇ ಹಂತದ ಯೋಜನೆ ಪೈಕಿ ಚರ್ಚ್ ಸ್ಟ್ರೀಟ್ ರಸ್ತೆ ಕಾಮಗಾರಿ ಮುಗಿದಿದೆ. ಮೆಜೆಸ್ಟಿಕ್ ಸಮೀಪದ ಧನ್ವಂತರಿ ರಸ್ತೆ ಹಾಗೂ ಗಾಂಧಿನಗರ ಆರನೇ ಕ್ರಾಸ್ ಕೆಲಸ ಶುರುವಾಲಿದೆ. ಬ್ರಿಗೇಡ್ ರಸ್ತೆ ಹೊರತುಪಡಿಸಿ ಉಳಿದ ರಸ್ತೆಗಳ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. 23 ರಸ್ತೆಗಳನ್ನು ಅಭಿವೃದ್ಧಿಪಡಿಸಲು ವಿಸ್ತೃತಾ ಯೋಜನಾ ವರದಿ ಸಿದ್ಧವಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.
‘ಬೆಸ್ಕಾಂ ಹಾಗೂ ಸಂಚಾರ ಪೊಲೀಸರ ಜತೆಗೆ ಸಮನ್ವಯದಿಂದ ಕೆಲಸ ಮಾಡಬೇಕು. ಇದಕ್ಕಾಗಿ 15 ದಿನಕ್ಕೊಮ್ಮೆ ಸಭೆ ನಡೆಸಬೇಕು. ಸಂಚಾರ ಮಾರ್ಗ ಬದಲಾವಣೆಗೆ ಮುನ್ನ ಸಂಚಾರ ಪೊಲೀಸರ ಜತೆಗೆ ಸಭೆ ನಡೆಸಬೇಕು’ ಎಂದು ಪರಮೇಶ್ವರ ಸೂಚಿಸಿದರು.
ಚರ್ಚ್ ಸ್ಟ್ರೀಟ್‌ನಲ್ಲಿನ ಟೆಂಡರ್ ಶ್ಯೂರ್ ರಸ್ತೆ ಬಗ್ಗೆ ಪ್ರಸ್ತಾಪಿಸಿದ ಸಚಿವರು, ‘ಗುಣಮಟ್ಟದ ರಸ್ತೆ ನಿರ್ಮಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಿ’ ಎಂದು ಸೂಚನೆ ನೀಡಿದರು.
*
ಸೆ.15ರೊಳಗೆ ಕಾಮಗಾರಿ ಪೂರ್ಣಕ್ಕೆ ತಾಕೀತು
ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿ ಗ್ರಾಮದಲ್ಲಿರುವ ಮೇಲ್ಸೇತುವೆ ಕೆಳಗಿರುವ ಸರ್ವಿಸ್ ರಸ್ತೆ ಕಾಮಗಾರಿಯನ್ನು ಸೆಪ್ಟೆಂಬರ್ 15ರೊಳಗೆ ಪೂರ್ಣಗೊಳಿಸಬೇಕು ಎಂದು ಪರಮೇಶ್ವರ ಹೇಳಿದರು.
ದೊಡ್ಡನೆಕ್ಕುಂದಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಅವರು, ರಾಜಕಾಲುವೆಯಿಂದ ಬರುವ ದುರ್ವಾಸನೆ ತಡೆಗಟ್ಟಬೇಕು ಹಾಗೂ ಕಸದ ರಾಶಿ ತೆಗೆಯಬೇಕು ಎಂದೂ ಹೇಳಿದರು.
ಮೇಲ್ಸೇತುವೆ ಕೆಳಗಿನ ಸರ್ವಿಸ್ ರಸ್ತೆ ಹಾಳಾಗಿದೆ ಎಂದು ಸ್ಥಳೀಯರು ಸಚಿವರ ಗಮನಕ್ಕೆ ತಂದರು. ‘ಮೇಲ್ಸೇತುವೆ ನಿರ್ಮಾಣವಾಗಿ ಹಲವು ವರ್ಷವಾಗಿದ್ದರೂ ಇದರ ಕೆಳಗಿನ ಸರ್ವಿಸ್ ರಸ್ತೆಯನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಇದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ, ಇಲ್ಲಿನ ರಾಜಕಾಲುವೆ ಕೂಡ ಅಸುರಕ್ಷಿತವಾಗಿದೆ. ಇದನ್ನು ಸರಿಪಡಿಸಬೇಕು’ ಎಂದು ಮನವಿ ಮಾಡಿದರು.
*
ಟೆಂಡರ್‌ಶ್ಯೂರ್ ಸುತ್ತಮುತ್ತ
12 ರಸ್ತೆಗಳು
ಮೊದಲ ಹಂತದಲ್ಲಿ ಕಾರ್ಯಗತ
₹200 ಕೋಟಿ
ಯೋಜನೆಯ ವೆಚ್ಚ
13 ರಸ್ತೆಗಳು
ಎರಡನೇ ಹಂತದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳು
23 ರಸ್ತೆಗಳು
ಮೂರನೇ ಹಂತದ ಕಾಮಗಾರಿಗಳು
₹250 ಕೋಟಿ
ಇದಕ್ಕೆ ಮೀಸಲಿಟ್ಟ ಹಣ
*
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.