ಬೆಂಗಳೂರು: ನಗರದ ದಕ್ಷಿಣ– ಪಶ್ಚಿಮ ಭಾಗದ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಮೈಸೂರು ರಸ್ತೆ, ಹತ್ತಾರು ಜಂಕ್ಷನ್‌ಗಳಲ್ಲಿ ಅಸಮರ್ಪಕ ನಿರ್ವಹಣೆಯಿಂದಾಗಿ ವಾಹನ ಸವಾರರಿಗೆ ಇದು ನಿತ್ಯವೂ ಸಂಕಷ್ಟದ ಹಾದಿಯಾಗಿದೆ.
ಕೆಂಗೇರಿ ವೃತ್ತದಿಂದ ಟೌನ್‌ಹಾಲ್ ತಲುಪುವ 17 ಕಿ.ಮೀ ಉದ್ದದ ಮಾರ್ಗದಲ್ಲಿ 13 ಜಂಕ್ಷನ್‌ಗಳಲ್ಲಿ ಸದಾ ಹೆಚ್ಚಿನ ದಟ್ಟಣೆ ಸದಾ ಇರುತ್ತದೆ. ನಾಲ್ಕೈದು ಜಂಕ್ಷನ್‌ಗಳಲ್ಲಂತೂ ವಾಹನಗಳು ನಿಂತಿರುತ್ತವೆ. ಇದರಿಂದ, ದಿನದ ಬಹುತೇಕ ಸಂದರ್ಭದಲ್ಲಿ ದಟ್ಟಣೆ ಉಂಟಾಗುತ್ತಿದೆ.
ಉತ್ತರಹಳ್ಳಿಯಿಂದ ಮೈಸೂರು ರಸ್ತೆ ಸಂಪರ್ಕಿಸುವ ಕೆಂಗೇರಿ ವೃತ್ತದಲ್ಲಿ ಅತಿಯಾದ ವಾಹನ ದಟ್ಟಣೆ ಇರುತ್ತದೆ. ಇದು ಉತ್ತರಹಳ್ಳಿಯಿಂದ ಮೈಸೂರು ಕಡೆಗೆ ಹಾಗೂ ಜ್ಞಾನಭಾರತಿ ಕಡೆಗೆ, ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕೆಂಗೇರಿ ಉಪನಗರದ ಕಡೆಗೆ, ಅದಕ್ಕೆ ವಿರುದ್ಧವಾಗಿರುವ ನಗರ ಪ್ರವೇಶ ಮತ್ತು ಕೆಂಗೇರಿ ಪಟ್ಟಣದ ಒಳಗೆ ಹೋಗುವ ವಾಹನಗಳ ಜಂಕ್ಷನ್. ಇಲ್ಲಿ ದ್ವಿಚಕ್ರ ವಾಹನ ಹಾಗೂ ಭಾರಿ ವಾಹನಗಳ ಓಡಾಟ ಹೆಚ್ಚಾಗಿರುವುದು ಹಾಗೂ ರಸ್ತೆಯ ಅವ್ಯವಸ್ಥೆಯಿಂದ ಸಂಚಾರ ಅಸ್ತವ್ಯಸ್ತವಾಗಿರುತ್ತದೆ.
ಜ್ಞಾನಭಾರತಿ ಜಂಕ್ಷನ್ ಅತಿ ಕಿರಿದಾಗಿದ್ದು, ಇಲ್ಲಿ ಆರಂಭವಾಗುವ ವಾಹನಗಳ ಸಾಲು ರಾಜರಾಜೇಶ್ವರಿನಗರ ಆರ್ಚ್‌ವರೆಗೆ ತಲುಪುತ್ತದೆ. ಆರ್ಚ್ ಜಂಕ್ಷನ್‌ನಲ್ಲಿ ಸಿಗ್ನಲ್‌ಮುಕ್ತ ಸಂಚಾರಕ್ಕೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ದಟ್ಟಣೆಗೆ ಇದರ ಕೊಡುಗೆ ಹೆಚ್ಚಾಗಿದೆ.
ಇನ್ನು ನಾಯಂಡಹಳ್ಳಿ ಸಮೀಪ ಮೇಲ್ಸೇತುವೆ ಏರಲು ವಾಹನ ಸವಾರರು ಸಾಕಷ್ಟು ಪ್ರಯಾಸಪಡಬೇಕಿದೆ. ಇಲ್ಲಿ ಮೇಲ್ಸೇತುವೆ ಬಿಎಂಟಿಸಿ ತಂಗುದಾಣ ಇದ್ದು, ಬಸ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಮೇಲ್ಸೇತುವೆ ಕಡೆಗೆ, ಕೆಳಭಾಗದ ವರ್ತುಲ ರಸ್ತೆ ಕಡೆಗೆ ಹೋಗುವ ವಾಹನಗಳಿಗೆ ತೊಂದರೆಯಾಗುತ್ತದೆ. ‘ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದೇವೆ. ಕನಿಷ್ಠ ಒಬ್ಬರು ಸಂಚಾರ ಪೊಲೀಸರನ್ನಾದರೂ ಇಲ್ಲಿ ನಿಯೋಜಿಸಿ ಎಂದು ಒತ್ತಾಯಿಸಿದ್ದರೂ, ಪೊಲೀಸರು ಕ್ರಮ ಕೈಗೊಂಡಿಲ್ಲ’ ಎಂದು ದೂರುತ್ತಾರೆ ಸ್ಥಳೀಯರು.
ಬಿಎಚ್‌ಇಎಲ್– ದೀಪಾಂಜಲಿ ನಗರ ಜಂಕ್ಷನ್‌ನಲ್ಲಿ ವಿಜಯನಗರ ಕಡೆಗೆ ಹೋಗುವ ವಾಹನಗಳು, ಮೈಸೂರು ರಸ್ತೆಯಲ್ಲೇ ಮುಂದುವರಿಯುವ ವಾಹನಗಳು ಸೇರಿಕೊಳ್ಳುವುದರಿಂದ ದಟ್ಟಣೆ ಉಂಟಾಗುತ್ತಿದೆ. ಇನ್ನು ಟೋಲ್‌ಗೇಟ್, ಹಳೇಗುಡ್ಡದಹಳ್ಳಿ ಜಂಕ್ಷನ್‌ಗಳಲ್ಲಿ ಸಿಗ್ನಲ್ ಹಾಗೂ ನಿಯಮಮೀರಿ ಅಡ್ಡಾದಿಡ್ಡಿ ಸಂಚರಿಸುವ ದ್ವಿಚಕ್ರ ವಾಹನಗಳಿಂದ ದಟ್ಟಣೆ ಜೊತೆಗೆ ನಿತ್ಯ ಒಂದಲ್ಲ ಒಂದು ಅಪಘಾತ ಅಪಘಾತಗಳು ಸಂಭವಿಸುತ್ತಿರುತ್ತವೆ. ಸಿರ್ಸಿ ವೃತ್ತದಲ್ಲಿ ಮೇಲ್ಸೇತುವೆ ಏರಲು ವಾಹನಗಳಿಗೆ ಇಲ್ಲಿಯೂ ಪ್ರಯಾಸದಾಯಕ. ವೃತ್ತದ ಕೆಳಭಾಗದ ಸಿಗ್ನಲ್‌ನಿಂದ ದಟ್ಟಣೆ ಮೇಲ್ಸೇತುವೆಯ ಮುಂಭಾಗಕ್ಕೆ ಬಂದು ನಿಲ್ಲುತ್ತದೆ.
ರಾತ್ರಿಯಾದರೆ ದಟ್ಟಣೆ ಹೆಚ್ಚು
ಸ್ಯಾಟಲೈಟ್ ಬಸ್ ನಿಲ್ದಾಣದ ಸಮೀಪದ ಮೈಸೂರು ರಸ್ತೆಯಲ್ಲಿ ರಾತ್ರಿಯಾಗುತ್ತಿದ್ದಂತೆಯೇ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತದೆ. ಖಾಸಗಿ ಬಸ್‌ಗಳು ರಸ್ತೆಯಲ್ಲಿ ಅಕ್ರಮವಾಗಿ ನಿಲುಗಡೆ ಮಾಡುವುದರಿಂದ ಪ್ರತಿನಿತ್ಯ ರಾತ್ರಿ 12ರವರೆಗೂ ಸಂಚಾರ ಅಸ್ತವ್ಯಸ್ತವಾಗುತ್ತದೆ. ಸರ್ಕಾರಿ ಬಸ್‌ಗಳು ಒಂದು ಕ್ಷಣವೂ ಬಸ್ ನಿಲ್ದಾಣದಿಂದ ಹೊರಗೆ ನಿಲ್ಲುವಂತಿಲ್ಲ ಎಂದು ಪೊಲೀಸರು ಆದೇಶಿಸಿದ್ದಾರೆ. ಆದರೆ ಹತ್ತಾರು ಖಾಸಗಿ ಬಸ್‌ಗಳು ವಾಹನ ಸಂಚಾರಕ್ಕೆ ಅಡ್ಡಿಯಾಗಿ ರಸ್ತೆಯಲ್ಲೇ ಸಾಲುಸಾಲಾಗಿ ನಿಂತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳು ವುದಿಲ್ಲ. ಜೊತೆಗೆ ಇಲ್ಲಿ ಹೋಟೆಲ್‌ಗಳು ಹೆಚ್ಚಾಗಿರುವುದರಿಂದ ಅವುಗಳ ಮುಂದೆಯೂ ವಾಹನಗಳು ನಿಂತಿರುತ್ತವೆ. ಈ ಅಕ್ರಮ ನಿಲುಗಡೆಯಿಂದ ಉಂಟಾಗುವ ಸಮಸ್ಯೆಯಿಂದ ಹಳೆಗುಡ್ಡದಹಳ್ಳಿ ಜಂಕ್ಷನ್‌ವರೆಗೂ ದಟ್ಟಣೆ ಉಂಟಾಗುತ್ತದೆ. ವಾರಾಂತ್ಯ ಹಬ್ಬಗಳ ಸಂದರ್ಭದಲ್ಲಿ ದಟ್ಟಣೆ ಬಹಳಷ್ಟು ಹೆಚ್ಚಾಗುತ್ತದೆ.
ತಿರುವುಗಳಿಂದ ಸಮಸ್ಯೆ ಹಲವು
ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ ಹಾಗೂ ಹೊಸ ಗುಡ್ಡದಹಳ್ಳಿ ಸಮೀಪದಲ್ಲಿ ಪೈಪ್‌ಲೈನ್‌ರಸ್ತೆ ಹಾಗೂ ಹೊಸಗುಡ್ಡದಹಳ್ಳಿ ಒಳಭಾಗಕ್ಕೆ ಹೋಗಲು ವಾಹನಗಳು ತಿರುವು ಪಡೆದುಕೊಳ್ಳುತ್ತವೆ. ಇದರಿಂದ ಮುಖ್ಯರಸ್ತೆಯ ವಾಹನಗಳ ಸಂಚಾರ ಪೀಕ್ ಅವರ್‌ನಲ್ಲಿ ಬಹುತೇಕ ನಿಂತುಹೋಗುತ್ತದೆ. ಈ ಎರಡು ತಿರುವುಗಳಲ್ಲಿ ಬೆಳಿಗ್ಗೆ ಮತ್ತು ಸಂಜೆಯ ತಲಾ ಎರಡು ತಾಸು ಮಾತ್ರ ಸಂಚಾರ ಪೊಲೀಸರು ಇರುತ್ತಾರೆ. ಉಳಿದ ಸಮಯದಲ್ಲಿ ವಾಹನ ಸಂಚಾರ ಅಡ್ಡಾದಿಡ್ಡಿಯಾಗಿರುತ್ತದೆ. ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಈ ಎರಡು ಸ್ಥಳಗಳಲ್ಲಿ ತಿರುವು ತಡೆದರೆ ಸಾಕಷ್ಟು ದಟ್ಟಣೆ ನಿವಾರಣೆ ಆಗುತ್ತದೆ ಎಂಬುದು ಸ್ಥಳೀಯ ಅಂಗಡಿಯ ಮಾಲೀಕ ರಮೇಶ್ ಅವರ ಅಭಿಪ್ರಾಯ.
ಬಿಡಬ್ಲ್ಯುಎಸ್‌ಎಸ್‌ಬಿ ನಿರ್ಲಕ್ಷ್ಯ
ಸಿರ್ಸಿ ಮೇಲ್ಸೇತುವೆ (ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆ) ಇಳಿದ ಮೇಲೆ ಎಸ್‌ಜೆಪಿ ಎಸ್‌ಪಿ ಒಟಿಸಿ ರಸ್ತೆಗಳಲ್ಲಿ ವಾಹನ ದಟ್ಟಣೆ ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೂ ಇರುತ್ತದೆ. ಈ ರಸ್ತೆಗಳು ಕಿರಿದಾಗಿದ್ದು ಗುಂಡಿಗಳಿಂದ ಕೂಡಿವೆ. ಒಳಚರಂಡಿ ನೀರು ನಿತ್ಯವೂ ರಸ್ತೆಯ ಮೇಲೆ ಹರಿಯುತ್ತಿರುತ್ತದೆ. ಒಂದು ವರ್ಷದಿಂದ ಬಿಡಬ್ಲ್ಯುಎಸ್‌ಎಸ್‌ಬಿ ಇಲ್ಲಿ ಕಾಮಗಾರಿ ನಡೆಸುತ್ತಲೇ ಇದೆ. ಆದರೆ ಸಮಸ್ಯೆ ಪರಿಹಾರವಾಗಿಲ್ಲ. ಗುಂಡಿ– ಜಲ್ಲಿ ಕಲ್ಲುಗಳ ಮಧ್ಯೆ ಒಳಚರಂಡಿಯ ಕೊಳಕಿನ ನಡುವೆ ನಾಗರಿಕರು ಸಂಚಾರಿಸಬೇಕಿದೆ. ಬಸ್‌ಗಳು ಹೆಚ್ಚಾಗಿ ಈ ರಸ್ತೆಗಳಲ್ಲಿ ಸಂಚರಿಸುವುದರಿಂದ ಕಿರಿದಾದ ರಸ್ತೆಯಲ್ಲಿ ತಿರುವು ಪಡೆಯಲು ಸಮಯವಾಗುತ್ತದೆ. ಇದರಿಂದಾಗಿ ಮೇಲ್ಸೇತುವೆ ಮೇಲೂ ವಾಹನಗಳು ಸಾಲು ನಿಲ್ಲುತ್ತವೆ.
ಹೊರ ವರ್ತುಲ ರಸ್ತೆ; ತಣಿಯದ ದಟ್ಟಣೆ ಕನಕಪುರ ರಸ್ತೆಯನ್ನು ಸಂಪರ್ಕಿಸುವ ಹೊರ ವರ್ತುಲ ರಸ್ತೆಯಲ್ಲಿ (ಡಾ. ಪುನೀತ್‌ರಾಜ್‌ಕುಮಾರ್ ರಸ್ತೆ) ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳು ನಿರ್ಮಾಣವಾಗಿದ್ದರೂ ವಾಹನ ಸಂಚಾರ ಸುಗಮವಾಗಿಲ್ಲ. ನೈಸ್ ಜಂಕ್ಷನ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು ದಟ್ಟಣೆಗೆ ಕೊಡುಗೆ ಇಲ್ಲಿಂದ ಆರಂಭವಾಗುತ್ತದೆ. ಇನ್ನು ಗಿರಿನಗರಕ್ಕೆ ಹೋಗುವ ಜಂಕ್ಷನ್‌ನಲ್ಲಿ ಮೇಲ್ಸೇತುವೆ ಸೀತಾ ವೃತ್ತದ ಕಡೆಗೆ ಹೋಗುವ ಜಂಕ್ಷನ್‌ನಲ್ಲಿ ಅಂಡರ್‌ಪಾಸ್‌ಗಳು ನಿರ್ಮಾಣವಾಗಿವೆ. ಈ ಜಂಕ್ಷನ್‌ಗಳಲ್ಲಿ ಸುಗಮಗೊಳ್ಳುವ ವಾಹನ ಸಂಚಾರಕ್ಕೆ ಇಟ್ಟುಮಡು ಜಂಕ್ಷನ್‌ನಲ್ಲಿ ತಡೆಯಾಗುತ್ತದೆ. ಇಲ್ಲಿನ ದಟ್ಟಣೆ ಹಿಂದಿನ ಅಂಡರ್‌ಪಾಸ್‌ವರೆಗೂ ತಲುಪುತ್ತದೆ. ಕತ್ತರಿಗುಪ್ಪೆ ಕಾಮಾಕ್ಯ ಚಿತ್ರಮಂದಿರ ಜಂಕ್ಷನ್‌ನಲ್ಲಿ ಸಿಗ್ನಲ್‌ಗಳಿಂದ ವಾಹನಗಳು ನಿಲುಗಡೆಯಾಗುವುದರಿಂದ ದಟ್ಟಣೆ ಹೆಚ್ಚಾಗುತ್ತದೆ. ‘ಕಾಮಾಕ್ಯ ಹಾಗೂ ಕತ್ತರಿಗುಪ್ಪೆ ಜಂಕ್ಷನ್‌ಗಳನ್ನು ಸಿಗ್ನಲ್‌ಮುಕ್ತ ಮಾಡುವುದಾಗಿ ಜನಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸುವವರು ಹಲವು ಬಾರಿ ಭರವಸೆಗಳನ್ನು ನೀಡಿದ್ದಾರೆ. ಆದರೆ ಈ ಸಮಸ್ಯೆ ನೀಗಿಸಲು ಯೋಜನೆ ಅನುಷ್ಠಾನವಾಗಿಲ್ಲ’ ಎಂದು ಗಿರಿನಗರ ನಿವಾಸಿ ವೆಂಕಟೇಶ ರಾಜು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.