ADVERTISEMENT

ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್‌: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 20:18 IST
Last Updated 3 ಸೆಪ್ಟೆಂಬರ್ 2024, 20:18 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಬೆಂಗಳೂರು: ಕಲಬುರಗಿ ಜಿಲ್ಲೆಯ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಖಾಸಗಿ–ಸಾರ್ವಜನಿಕ ಸಹಭಾಗಿತ್ವದಲ್ಲಿ ಮೆಗಾ ಜವಳಿ ಪಾರ್ಕ್‌ ಸ್ಥಾಪಿಸಲಾಗುತ್ತಿದೆ. ಒಂದು ಲಕ್ಷ ಜನರಿಗೆ ನೇರ ಉದ್ಯೋಗ ದೊರಕಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ವಿಕಾಸಸೌಧದಲ್ಲಿ ಮಂಗಳವಾರ ನಡೆದ ಸಭೆಯ ನಂತರ ಮಾತನಾಡಿದ ಅವರು, ಒಂದು ಲಕ್ಷ ಜನರಿಗೆ ನೇರ ಉದ್ಯೋಗ ದೊರೆತರೆ, ಎರಡು ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಜನೆಯಾಗಲಿದೆ. ಮೂಲ ಸೌಕರ್ಯಕ್ಕಾಗಿ ಬಜೆಟ್‌ನಲ್ಲೇ ₹50 ಕೋಟಿ ಅನುದಾನ ಘೋಷಿಸಲಾಗಿದೆ ಎಂದರು.

ಪಾರ್ಕ್‌ ಸ್ಥಾಪನೆಗೆ ಪ್ರತಿನಿತ್ಯ ಸುಮಾರು 1.6ಕೋಟಿ ಲೀಟರ್‌ ನೀರಿನ ಅವಶ್ಯಕತೆ ಇದೆ. ಮದ್ರಿ ಗ್ರಾಮದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬ್ಯಾರೇಜ್‌ನಿಂದ ನೀರು ಪೂರೈಕೆ ಮಾಡುವ ಕುರಿತು ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಪಾರ್ಕ್‌ ಆವರಣದಲ್ಲಿನ ಕೆರೆಯನ್ನೂ ಪುನಶ್ಚೇತನಗೊಳಿಸಲಾಗುವುದು. ಮಳೆನೀರು ಸಂಗ್ರಹಕ್ಕೂ ಒತ್ತು ನೀಡಲಾಗುವುದು ಎಂದರು.

ADVERTISEMENT

ಜವಳಿ ಪಾರ್ಕ್‌ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ದೀರ್ಘಕಾಲ ಬಾಳಿಕೆ ಬರುವ ರಸ್ತೆಗಳನ್ನು ನಿರ್ಮಿಸಲು ಸೂಚಿಸಲಾಗಿದೆ. ಸೋಲಾರ್‌ ದೀಪಗಳನ್ನು ಅಳವಡಿಸುವ ಮೂಲಕ ವಿದ್ಯುತ್‌ ಮಿತವ್ಯಯಕ್ಕೆ ಸಲಹೆ ನೀಡಲಾಗಿದೆ. 180 ಮೆಗಾವಾಟ್‌ ವಿದ್ಯುತ್ ಸಂಪರ್ಕ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ (ಜವಳಿ) ವಿಪುಲ್ ಬನ್ಸಾಲ್‌, ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ, ಜವಳಿ ಅಭಿವೃದ್ಧಿ ನಿಗಮದ ಆಯುಕ್ತೆ ಕೆ.ಜ್ಯೋತಿ, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.