ಬೆಂಗಳೂರು: ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಲಾಗಿರುವ ತಿಪ್ಪಗೊಂಡನಹಳ್ಳಿ ಜಲಾಶಯದ ನದಿ ಪಾತ್ರದ ಬಫರ್ ವಲಯವನ್ನು ಕಡಿಮೆಗೊಳಿಸುವುದರ ಹಿಂದೆ, ಅಕ್ರಮಗಳಿಗೆ ‘ಸಕ್ರಮದ ಭಾಗ್ಯ’ ನೀಡುವ ಸಂಶಯ ಇದೆ ಎಂಬ ಅಪಸ್ವರ ವ್ಯಕ್ತವಾಗಿದೆ.
ಜಲಾನಯನ ಹಾಗೂ ಜಲಾಶಯದ ರಕ್ಷಣೆಗಾಗಿಯೇ ನಿಗದಿಪಡಿಸಲಾಗಿದ್ದ ಬಫರ್ ವಲಯವನ್ನು ಕುಗ್ಗಿಸಿದರೆ ಮಾಲಿನ್ಯಕಾರಕ ಚಟುವಟಿಕೆ ನಡೆಸುತ್ತಿರುವವರಿಗೆ ಪರವಾನಗಿ ಕೊಟ್ಟಂತಾಗುತ್ತದೆ ಎಂಬ ವಾದವೂ ಮುನ್ನೆಲೆಗೆ ಬಂದಿದೆ.
ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಜಲಾನಯನ ಪ್ರದೇಶದ ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಪ್ರದೇಶದಲ್ಲಿ ಬಫರ್ ವಲಯವನ್ನು ಕಡಿಮೆ ಮಾಡಿರುವ 2019ರ ಆದೇಶವನ್ನು ಅನುಷ್ಠಾನ ಮಾಡಲು ಸರ್ಕಾರ ಮುಂದಾಗಿದೆ. ವಲಯ– 3 ಮತ್ತು ವಲಯ– 4ರ ಬಫರ್ ವಲಯವನ್ನು ಇಳಿಸಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬಫರ್ ವಲಯವನ್ನು 500 ಮೀಟರ್‌ಗೆ ಇಳಿಸುವುದರಿಂದ ನದಿ ದಡದಲ್ಲೇ ಈಗಾಗಲೇ ಅನಧಿಕೃತವಾಗಿ ನಿರ್ಮಾಣವಾಗಿರುವ ಕಾರ್ಖಾನೆ, ಬಡಾವಣೆ, ಶಾಲೆ– ಕಾಲೇಜುಗಳಿಗೆ ಅಧಿಕೃತವಾಗಿ ಮಾಲಿನ್ಯ ಹರಿಸುವಂತೆ ಪರವಾನಗಿ ನೀಡಿದಂತಾಗುತ್ತದೆ ಎಂಬ ಆಕ್ರೋಶ ಪರಿಸರ ಕಾರ್ಯಕರ್ತರಿಂದ ವ್ಯಕ್ತವಾಗಿದೆ.
ತುಮಕೂರು ರಸ್ತೆ ದಾಬಸ್‌ಪೇಟೆಯಿಂದ ಶಿವಗಂಗೆ, ಬೆಂಗಳೂರು ವಾಯವ್ಯದ ಕಡೆಗೆ ಹಾಗೂ ಉತ್ತರದಲ್ಲಿ ನಂದಿಬೆಟ್ಟದವರೆಗೆ ಸುಮಾರು 64 ಕಿ.ಮೀ ನದಿಪಾತ್ರವಿದೆ. ನಂದಿಬೆಟ್ಟದಿಂದ ಅರ್ಕಾವತಿ ಹರಿದರೆ, ಶಿವಗಂಗೆ ಬೆಟ್ಟದಿಂದ ಕುಮುದ್ವತಿ ನದಿ ಹರಿದು ತಿಪ್ಪಗೊಂಡನಹಳ್ಳಿ ಜಲಾಶಯ ತಲುಪುತ್ತದೆ. ಕುಮುದ್ವತಿ ನದಿ ಪಾತ್ರದಲ್ಲಿ ಮಾಲಿನ್ಯದ ಸಮಸ್ಯೆ ಅತಿಯಾಗಿಲ್ಲ. ಆದರೆ, ನಂದಿ ಬೆಟ್ಟದಿಂದ ಹರಿಯುವ ಅರ್ಕಾವತಿಯಲ್ಲಿ ಮಾಲಿನ್ಯವೇ ಅಧಿಕ.
ತಿಪ್ಪಗೊಂಡನಹಳ್ಳಿ ಜಲಾಶಯ ಹಾಗೂ ಜಲಾನಯನ ಪ್ರದೇಶವನ್ನು ಸಂರಕ್ಷಿಸಲು 2003ರ ನವೆಂಬರ್ 18ರಂದು ಸರ್ಕಾರ ಆದೇಶ ಹೊರಡಿಸಿತ್ತು. ನಾಲ್ಕು ವಲಯಗಳನ್ನಾಗಿ ವಿಂಗಡಿಸಿ ಬಫರ್ ವಲಯವನ್ನು ನಿಗದಿಪಡಿಸಲಾಗಿತ್ತು. ಈ ಆದೇಶವನ್ನು 2014ರ ಜುಲೈ 24ರಂದು ವಾಪಸ್ ಪಡೆದಿತ್ತು. 2019 ಜುಲೈ 20ರಂದು ಬಫರ್ ವಲಯ ಮರುನಿಗದಿ ಮಾಡಿ ಆದೇಶ ಹೊರಡಿಸಲಾಗಿತ್ತು.
ಅರ್ಕಾವತಿ ನದಿ ಪಾತ್ರದಲ್ಲಿ ಅದರಲ್ಲೂ ಹೆಸರಘಟ್ಟದಿಂದ ತಿಪ್ಪಗೊಂಡನಹಳ್ಳಿ ಜಲಾಶಯದವರೆಗಿನ ಪ್ರದೇಶದಲ್ಲಿ ಈಗಾಗಲೇ ಸಾಕಷ್ಟು ಅಕ್ರಮ ಕಟ್ಟಡಗಳು, ಕಾರ್ಖಾನೆಗಳು, ಶಾಲಾ–ಕಾಲೇಜುಗಳು ನಿರ್ಮಾಣವಾಗಿವೆ. ಇವುಗಳು ಈಗಾಗಲೇ ಮಾಲಿನ್ಯಕ್ಕೆ ಕಾರಣವಾಗಿದ್ದು, ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಒಳಚರಂಡಿ ನೀರಿನ ಜೊತೆಗೆ ಕಾರ್ಖಾನೆಗಳ ರಾಸಾಯನಿಕವೂ ಹರಿಯುತ್ತಿದೆ.
ಬಫರ್ ವಲಯದಲ್ಲಿರುವ ಈ ಎಲ್ಲ ಅಕ್ರಮ ನಿರ್ಮಾಣದಾರರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಾಲ್ಕಾರು ವರ್ಷಗಳ ಹಿಂದೆ ನೋಟಿಸ್ ನೀಡಿತ್ತಾದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತ್ಯಾಜ್ಯ ಸಂಸ್ಕರಣೆ, ಮಳೆ ನೀರು ಸಂಗ್ರಹ, ನೀರಿನ ಮರುಬಳಕೆ ವ್ಯವಸ್ಥೆ ಎನ್ನುವುದು ಆದೇಶದಲ್ಲಿ ಮಾತ್ರ ಉಳಿದಿದೆ ಎಂಬುದು ಪರಿಸರ ಕಾರ್ಯಕರ್ತೆ ನಿರ್ಮಲ ಅವರ ಅಭಿಪ್ರಾಯ.
ಇಷ್ಟೆಲ್ಲ ಮಾಲಿನ್ಯ ಹಾಗೂ ಒತ್ತುವರಿಯ ಸಮಸ್ಯೆ ಹೊಂದಿರುವ ನದಿ ಪಾತ್ರದ ಬಫರ್ ವಲಯವನ್ನೂ ಕಡಿಮೆ ಮಾಡುವುದು ರಾಜಕೀಯ ವ್ಯಕ್ತಿಗಳ ಕಟ್ಟಡಗಳನ್ನು ಅಧಿಕೃತಗೊಳಿಸುವ ಹುನ್ನಾರವೇ ಹೊರತು, ಮಾಲಿನ್ಯ ತಡೆಯುವ ಉದ್ದೇಶವಿಲ್ಲ ಎಂದು ಪರಿಸರ ಕಾರ್ಯಕರ್ತರು ಆರೋಪಿಸುತ್ತಾರೆ.
ಬದಲಾಗಿರುವುದು ಏನು?
2003ರ ಆದೇಶದದ ಅನುಸಾರ ವಲಯ–3ರಲ್ಲಿ ಅರ್ಕಾವತಿ ನದಿ ದಡ (ಹೆಸರಘಟ್ಟ ಕೆರೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯ) ಹಾಗೂ ಕುಮುದ್ವತಿ ನದಿ ದಡದಿಂದ 1 ಕಿ.ಮೀವರೆಗಿನ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಕೃಷಿ ಹೊರತಾದ ಯಾವುದೇ ಚಟುವಟಿಕೆಗಳನ್ನು ಸಮ್ಮತಿ ಇಲ್ಲದೆ ನಡೆಸುವಂತಿಲ್ಲ. 2019ರಲ್ಲಿ ಹೊರಡಿಸಲಾದ ಪರಿಷ್ಕೃತ ಆದೇಶದಲ್ಲಿ ಈ ಅಂತರವನ್ನು 500 ಮೀಟರ್‌ಗೆ ಇಳಿಸಲಾಗಿದೆ. 2003ರಲ್ಲಿ ವಲಯ–4ರಲ್ಲಿ ಇದೇ ಪ್ರದೇಶದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ಕೈಗಾರಿಕೆ ಎಂದು ವರ್ಗೀಕರಿಸಿರುವ ಕೈಗಾರಿಕೆಗಳಿಗೆ ಬಫರ್ ವಲಯವನ್ನು 1 ಕಿ.ಮೀನಿಂದ 2 ಕಿ.ಮೀವರೆಗೆ ಎಂದು ನಿಗದಿಪಡಿಸಲಾಗಿತ್ತು. ಒಂದು ಅಂತಸ್ತಿನ ಹೊಸ ಕಟ್ಟಡಗಳಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೊಳ್ಳುವ ಷರತ್ತಿನ ಮೇರೆಗೆ ಅನುಮತಿ ನೀಡಲು ಸೂಚಿಸಲಾಗಿತ್ತು. 2019ರ ಪರಿಷ್ಕೃತ ಆದೇಶದಲ್ಲಿ 1ರಿಂದ 2 ಕಿ.ಮೀವರೆಗೆ ಎಂದಿದ್ದ ಬಫರ್ ವಲಯವನ್ನು 500 ಮೀಟರ್‌ನಿಂದ 1 ಕಿ.ಮೀವರೆಗೆ ಎಂದು ಬದಲಾವಣೆ ಮಾಡಲಾಯಿತು. ಹೀಗೆ ಮಾಡುವ ಮೂಲಕ ಮೊದಲು ನಿಗದಿಯಾಗಿದ್ದ ಬಫರ್ ವಲಯವನ್ನು ಅರ್ಧಕ್ಕೆ ಕುಗ್ಗಿಸಲಾಯಿತು. ಕೈಗಾರಿಕೆಗಳು ಮಳೆ ನೀರು ಸಂಗ್ರಹ ತ್ಯಾಜ್ಯ ನೀರು ಸಂಸ್ಕರಣೆ ವ್ಯವಸ್ಥೆ ಒಳಗೊಂಡಿರಬೇಕು ವಸತಿ ಕಟ್ಟಡಗಳು ತ್ಯಾಜ್ಯ ಹೊರಹಾಕದಂತಿರಬೇಕು ಮಳೆ ನೀರು ಸಂಗ್ರಹಿಸಬೇಕು ನೀರನ್ನು ಮರುಬಳಕೆ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಇದಲ್ಲದೆ ಶೈಕ್ಷಣಿಕ ವೈದ್ಯಕೀಯ ಸಂಸ್ಥೆಗಳು ಆಸ್ಪತ್ರೆಗಳು ಸರ್ಕಾರಿ ಹಾಸ್ಟೆಲ್‌ಗಳು ಈ ಎಲ್ಲ ಸೌಲಭ್ಯ ಹೊಂದಿರಬೇಕು ಎಂದು 2019ರ ಆದೇಶದಲ್ಲಿ ಹೊಸದಾಗಿ ಸೇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.