ADVERTISEMENT

26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 20:03 IST
Last Updated 5 ಡಿಸೆಂಬರ್ 2023, 20:03 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಅಪರಾಧ ಪ್ರಕರಣದ ವಿಚಾರಣೆಗೆ ಗೈರಾಗಿ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ದೇವೇಗೌಡ ಅವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಹಾಸನ ಜಿಲ್ಲೆಯ ಆಲೂರಿನ ದೇವೇಗೌಡ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ. ನಂತರ, ನ್ಯಾಯಾಲಯದ ವಿಚಾರಣೆಗೆಹಾಜರಾಗಿರಲಿಲ್ಲ. ಈತನ ಬಂಧನಕ್ಕೆ ವಾರಂಟ್ ಸಹ ಜಾರಿಯಾಗಿತ್ತು’ ಎಂದು ಪೊಲೀಸರು ಹೇಳಿದರು.

‘ರಾತ್ರಿ ಹೊತ್ತು ನಡೆಯುವ ಅಪರಾಧ ತಡೆಗಾಗಿ ಇತ್ತೀಚೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ದೇವೇಗೌಡನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು. ಆತ ಕಳ್ಳತನ ಪ್ರಕರಣದ ಆರೋಪಿ ಎಂಬುದು ತಿಳಿಯಿತು’ ಎಂದರು.

ನ್ಯಾಯಾಲಯದ ಬಳಿ ಹೋಟೆಲ್‌ನಲ್ಲಿ ಕೆಲಸ: ‘1997ರಲ್ಲಿ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ದೇವೇಗೌಡ ಕಳ್ಳತನ ಮಾಡಿದ್ದ. ಈತನನ್ನು ಪೊಲೀಸರು ಬಂಧಿಸಿದ್ದರು. ಜಾಮೀನು ಮೇಲೆ ಹೊರಬಂದಿದ್ದ ಈತ, ನ್ಯಾಯಾಲಯ ಬಳಿಯ ಹೋಟೆಲ್‌ನಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ದ. ಅಂದಿನಿಂದ ಇಲ್ಲಿವರೆಗೂ ಹೋಟೆಲ್‌ನಲ್ಲಿಯೇ ಕೆಲಸ ಮಾಡುತ್ತಿದ್ದ’ ಎಂದು ಹೇಳಿದರು.

‘ನ್ಯಾಯಾಲಯ ಸಮೀಪವೇ ಹೋಟೆಲ್‌ ಇದ್ದರೂ ಆರೋಪಿ ಒಮ್ಮೆಯೂ ಪ್ರಕರಣದ ವಿಚಾರಣೆಗೆ ಹೋಗಿರಲಿಲ್ಲ. ಆರೋಪಿ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ, ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ಪೊಲೀಸರು, ಬೆಂಗಳೂರು ಹಾಗೂ ಹಾಸನ ಸೇರಿದಂತೆ ಹಲವು ಊರುಗಳಲ್ಲಿ ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಆರೋಪಿ ನ್ಯಾಯಾಲಯ ಬಳಿಯ ಹೋಟೆಲ್‌ನಲ್ಲಿದ್ದ ಮಾಹಿತಿ ಯಾರಿಗೂ ಗೊತ್ತಿರಲಿಲ್ಲ. ಈತ ಡಿ. 3ರಂದು ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡಿ ಸಿಕ್ಕಿಬಿದ್ದ’ ಎಂದು ತಿಳಿಸಿದರು.

‘ನ್ಯಾಯಾಲಯ ಬಿಟ್ಟು ಎಲ್ಲ ಕಡೆಯೂ ಪೊಲೀಸರು ಹುಡುಕುತ್ತಾರೆಂಬುದು ಗೊತ್ತಿತ್ತು. ಹೀಗಾಗಿ, ನ್ಯಾಯಾಲಯ ಬಳಿಯ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ. ವಕೀಲರು, ಪೊಲೀಸರು ಹೋಟೆಲ್‌ಗೆ ಬಂದು ಹೋಗುತ್ತಿದ್ದರು. ಆದರೆ, ಯಾರೊಬ್ಬರಿಗೂ ನಾನು ಆರೋಪಿ ಎಂಬುದು ಗೊತ್ತಾಗಿರಲಿಲ್ಲ’ ಎಂಬುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.