ADVERTISEMENT

ಪ್ಯಾಂಟ್‌ಗಳಲ್ಲಿ ಡ್ರಗ್ಸ್ ಸಾಗಣೆ: ಜೈಲಿನಲ್ಲಿ ಸಿಕ್ಕಿಬಿದ್ದ ಕೈದಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
ಡ್ರಗ್ಸ್
ಡ್ರಗ್ಸ್    

ಬೆಂಗಳೂರು: ಜೀನ್ಸ್‌ ಪ್ಯಾಂಟ್‌ಗಳಲ್ಲಿ ಡ್ರಗ್ಸ್ ಬಚ್ಚಿಟ್ಟುಕೊಂಡು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ಸಾಗಿಸುತ್ತಿದ್ದ ವಿಚಾರಾಣಾಧೀನ ಕೈದಿ ಶಾಹಿದ್ ಪಾಷಾ ಅಲಿಯಾಸ್ ನ್ಯಾರೊ ವಿರುದ್ಧ ಪ್ರಕರಣ ದಾಖಲಾಗಿದೆ.

‘ಜೈಲಿನ ಅಧೀಕ್ಷಕ ಡಾ. ಮಲ್ಲಿಕಾರ್ಜುನ್ ಸ್ವಾಮಿ ಅವರು ಡ್ರಗ್ಸ್ ಸಾಗಣೆ ಬಗ್ಗೆ ದೂರು ನೀಡಿದ್ದಾರೆ. ಎನ್‌ಡಿಪಿಎಸ್ ಹಾಗೂ ಕರ್ನಾಟಕ ಕಾರಾಗೃಹ ಕಾಯ್ದೆಯಡಿ ಶಾಹಿದ್ ಪಾಷಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಪರಾಧ ಪ್ರಕರಣದಲ್ಲಿ ಜೈಲು ಸೇರಿರುವ ಶಾಹಿದ್ ಪಾಷಾನನ್ನು ಜಗಜೀವನರಾಮ್ ನಗರ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಸಂಗಪ್ಪ ಹಾಗೂ ವಿನಯ್, ಜೂನ್ 27ರಂದು ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆದೊಯ್ದಿದ್ದರು. ವಿಚಾರಣೆ ಮುಗಿದ ಬಳಿಕ, ಆತನನ್ನು ವಾಪಸು ಕಾರಾಗೃಹಕ್ಕೆ ಕರೆತಂದಿದ್ದರು.’

ADVERTISEMENT

‘ಕಾರಾಗೃಹದ ಪ್ರವೇಶ ದ್ವಾರದಲ್ಲಿ ಶಾಹಿದ್‌ ಪಾಷಾನನ್ನು ಸಿಬ್ಬಂದಿ ತಪಾಸಣೆಗೆ ಒಳಪಡಿಸಿದ್ದರು. ಆತನ ಬಳಿಯಿದ್ದ ಎರಡು ಜೀನ್ಸ್‌ ಪ್ಯಾಂಟ್‌ಗಳ ಒಳಭಾಗದಲ್ಲಿ 1 ಗ್ರಾಂ ಬ್ರೌನ್ ಶುಗರ್ ಹಾಗೂ 11 ಗ್ರಾಂ ಗಾಂಜಾ ಇರುವುದು ಗೊತ್ತಾಗಿತ್ತು. ಅವುಗಳನ್ನು ಜಪ್ತಿ ಮಾಡಿದ್ದ ಸಿಬ್ಬಂದಿ, ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಕಾರಾಗೃಹ ಬಳಿ ಮತ್ತೊಬ್ಬ ಬಂಧನ: ಕಾರಾಗೃಹದೊಳಗಿದ್ದ ಕೈದಿಗೆ ಡ್ರಗ್ಸ್ ನೀಡಲು ಬಂದಿದ್ದ ತಂಗರಾಜು ಅಲಿಯಾಸ್ ಪಾಲ್ (25) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕೈದಿ ಮೊಹಮ್ಮದ್ ಇಮ್ತಿಯಾಜ್ ಖಾನ್‌ಗೆ ಡ್ರಗ್ಸ್ ನೀಡಲೆಂದು ಆರೋಪಿ ತಂಗರಾಜು ಕಾರಾಗೃಹ ಬಳಿ ಬಂದಿದ್ದ. ಕಾರಾಗೃಹದೊಳಗೆ ಡ್ರಗ್ಸ್ ಸಾಗಿಸಲು ಕಾಯುತ್ತಿದ್ದ. ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ₹ 4 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಕೈದಿ ಹಾಗೂ ತಂಗರಾಜು ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.