ADVERTISEMENT

ನಿವೃತ್ತ ಪ್ರಾಧ್ಯಾಪಕ ಎನ್‌.ಎಸ್‌.ಅಶೋಕ್‌ ಕುಮಾರ್ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 18:56 IST
Last Updated 8 ನವೆಂಬರ್ 2020, 18:56 IST
ನಿವೃತ್ತ ಪ್ರಾಧ್ಯಾಪಕ ಎನ್‌.ಎಸ್‌.ಅಶೋಕ್‌ ಕುಮಾರ್
ನಿವೃತ್ತ ಪ್ರಾಧ್ಯಾಪಕ ಎನ್‌.ಎಸ್‌.ಅಶೋಕ್‌ ಕುಮಾರ್    

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎನ್‌.ಎಸ್‌.ಅಶೋಕ್‌ ಕುಮಾರ್ (64) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮೈಕೊ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೆಎಎಸ್‌ ಕಾಲೊನಿ ನಿವಾಸಿ ಅಶೋಕ್‌ ಕುಮಾರ್, ಪತ್ನಿ ಹಾಗೂ ಪುತ್ರನ ಜೊತೆ ವಾಸವಿದ್ದರು. ಭಾನುವಾರ ಬೆಳಿಗ್ಗೆ ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ‘ನನ್ನ ಸಾವಿಗೆ ನಾನೇ ಕಾರಣ’ ಎಂಬ ಮರಣ ಪತ್ರವೂ ಸಿಕ್ಕಿದೆ’ ಎಂದು ಪೊಲೀಸರು ಹೇಳಿದರು.

‘ಶನಿವಾರ ರಾತ್ರಿ 12ರವರೆಗೂ ಪತ್ನಿ ಜೊತೆ ಅಶೋಕ್‌ ಕುಮಾರ್ ಮಾತನಾಡುತ್ತ ಕುಳಿತಿದ್ದರು. ನಂತರ ಕೊಠಡಿಗೆ ಹೋಗಿ ಮಲಗಿದ್ದರು. ಬೆಳಿಗ್ಗೆ ಬಾಗಿಲು ತೆರೆದಿರಲಿಲ್ಲ. ಅನುಮಾನಗೊಂಡ ಕುಟುಂಬಸ್ಥರು, ಕೊಠಡಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡಿದೆ’ ಎಂದೂ ಹೇಳಿದರು.

ADVERTISEMENT

‘ಕುಟುಂಬದವರು ನೀಡಿರುವ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ. ಅದರ ವರದಿ ಬಂದ ನಂತರ ಮತ್ತಷ್ಟು ಮಾಹಿತಿ ತಿಳಿಯಲಿದೆ’ ಎಂದೂ ತಿಳಿಸಿದರು.

ಮುಖ್ಯಸ್ಥರಾಗಿ ನಿವೃತ್ತಿ; ಶಿವಮೊಗ್ಗದ ಅಶೋಕ್‌ ಕುಮಾರ್, ಮೈಸೂರಿನಲ್ಲಿ ಪದವಿ ಪೂರ್ಣಗೊಳಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ನಂತರ, ಅದೇ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು.

ವಿದ್ಯುನ್ಮಾನ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಮೂರು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಕುಲಸಚಿವರಾಗಿಯೂ (ಮೌಲ್ಯಮಾಪನ) ಅವರು ಕೆಲಸ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.