ಬೆಂಗಳೂರು: ನಗರದ ಮೈಸೂರು ರಸ್ತೆ ಮೇಲ್ಸೇತುವೆಯ (ಬಿಜಿಎಸ್) ಜಾಯಿಂಟ್‌ನಲ್ಲಿ ಮೂರ್ನಾಲ್ಕು ಬೋಲ್ಟ್‌ಗಳು ಹೊರಬಂದು ಮಂಗಳ ವಾರ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಯಿತು.
ಬಿಬಿಎಂಪಿಯ ಯೋಜನೆ ವಿಭಾಗದ ಎಂಜಿನಿಯರ್‌ಗಳು ಮಂಗಳವಾರ ರಾತ್ರಿಯಿಡೀ ಈ ಸಮಸ್ಯೆಯನ್ನು ನಿವಾರಿಸಲು ಶ್ರಮಪಟ್ಟರು.
ಪುರಸಭೆ ಕಡೆಯಿಂದ ಮೇಲ್ಸೇತುವೆಯ ಜಾಯಿಂಟ್‌ನ ಒಂದು ಭಾಗದಲ್ಲಿ ನಾಲ್ಕು ಬೋಲ್ಟ್‌ಗಳು ಹೊರಬಂದಿರುವುದು ಮಂಗಳವಾರ ಮಧ್ಯಾಹ್ನ ಗಮನಕ್ಕೆ ಬಂದಿತ್ತು. ಸಂಚಾರ ಪೊಲೀಸರು ಬ್ಯಾರಿಕೇಡ್
ಗಳನ್ನು ಅಳವಡಿಸಿ, ವಾಹನ ಸವಾರರನ್ನು ಎಚ್ಚರಿಸಿದರು. ಒಂದು ಕಡೆ ಬ್ಯಾರಿಕೇಡ್ ಇದ್ದುದರಿಂದ ಉಂಟಾದ ವಾಹನ ದಟ್ಟಣೆ ಮಂಗಳವಾರ ಮಧ್ಯರಾತ್ರಿಯವರೆಗೂ ಮುಂದುವರಿದಿತ್ತು.
‘ಮೇಲ್ಸೇತುವೆ ಜಾಯಿಂಟ್‌ನಲ್ಲಿ ಬೋಲ್ಟ್ ಹೊರಬಂದಿದ್ದು ಅದನ್ನು ಮತ್ತೆ ಅಳವಡಿಸುವ ಕಾರ್ಯವನ್ನು ಆರಂಭಿಸಿದ್ದೇವೆ. ಇದರ ತಂತ್ರಜ್ಞಾನ ಹಾಗೂ ಅದಕ್ಕೆ ಬೇಕಿರುವ ಉಪಕರಣಗಳು ಸ್ಥಳೀಯವಾಗಿ ಸಿಗುವುದು ವಿರಳ. ಆದರೂ ತಂತ್ರಜ್ಞ
ರನ್ನು ಹುಡುಕಿ ಕರೆತಂದಿದ್ದೇವೆ. ಅದನ್ನು ಅಳವಡಿಸಲು ಒಂದಷ್ಟು ಸಮಯ ಬೇಕಿದೆ. ಬುಧವಾರ ಬೆಳಿಗ್ಗೆವರೆಗೆ ಎಲ್ಲವೂ ಸರಿಯಾಗುತ್ತದೆ’ ಎಂದು ಬಿಬಿಎಂಪಿ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್ ವಿನಾಯಕ ಎಸ್. ಸುಗೂರ್
ಹೇಳಿದರು.
‘ಮೇಲ್ಸೇತುವೆಯ ಈ ಕೆಲಸದ ನಿರ್ವಹಣೆ ಅವಧಿ ಮುಗಿದಿದೆ. ಇಂತಹ ಉಪಕರಣಗಳು ಸ್ಥಳೀಯವಾಗಿ ಲಭ್ಯವಿರದ ಕಾರಣ ತಕ್ಷಣವೇ ದುರಸ್ತಿ ಕಾರ್ಯ ಸಾಧ್ಯವಾಗಿರಲಿಲ್ಲ. ತಂತ್ರಜ್ಞರನ್ನು ಸಂಜೆ ವೇಳೆಗೆ ಕರೆತಂದು ದುರಸ್ತಿ ಕಾರ್ಯ ಆರಂಭಿಸಲಾಗಿದೆ’ ಎಂದರು.
‘ನಗರದ ಎಲ್ಲ 47 ಮೇಲ್ಸೇತುವೆಯಲ್ಲೂ ಪರಿವೀಕ್ಷಣೆ ಕಾರ್ಯ ನಡೆಸಲು ನಮ್ಮ ಎಂಜಿನಿಯರ್‌ಗಳಿಗೆ ಸೂಚಿಸಲಾಗುತ್ತದೆ. ಕಾಲಕಾಲಕ್ಕೆ ಇದರ ಬಗ್ಗೆ ಪರಿವೀಕ್ಷಣೆ ಆಗುತ್ತಿರಬೇಕು. ಮುಂಜಾಗ್ರತೆ ವಹಿಸಬೇಕು. ಈ ಬಗ್ಗೆ ಬುಧವಾರದಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ’
ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.