–ಬೈಲಮೂರ್ತಿ ಜಿ.
ಹೆಸರಘಟ್ಟ: ಹೆಸರಘಟ್ಟ ಕೆರೆ ಮತ್ತು ಅರ್ಕಾವತಿ ನದಿಯನ್ನು ಸಂಪರ್ಕಿಸುವ ಕೆರೆ ಕೋಡಿ ಕಾಲುವೆಯು ತ್ಯಾಜ್ಯ, ಗಿಡಗಂಟಿಗಳಿಂದ ಆವೃತವಾಗಿದೆ. ಇದರಿಂದ ಸ್ಥಳೀಯವಾಗಿ ಶುಚಿತ್ವದ ಸಮಸ್ಯೆ ಎದುರಾಗಿದ್ದರೆ, ಇನ್ನೊಂದೆಡೆ ಅರ್ಕಾವತಿ ನದಿಯ ನೀರಿನ ಮೂಲ ಸೆಲೆಗೆ ಅಪಾಯ ಎದುರಾಗಿದೆ.
ಕೋಡಿ ಬೀಳುವ ಹೆಸರಘಟ್ಟ ಕೆರೆ ನೀರು ಇದೇ ಕಾಲುವೆಯ ಮೂಲಕ ಹಾದು ಮುಂದೆ ತೊರೆನಾಗಸಂದ್ರದ ಬಳಿ ಅರ್ಕಾವತಿ ನದಿಗೆ ಸೇರುತ್ತದೆ.
ಈ ಮಧ್ಯದ ಕಾಲುವೆ ಈಗ ದುಸ್ಥಿತಿಯಲ್ಲಿದ್ದು, ತ್ಯಾಜ್ಯ ಸುರಿಯಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳು ನಿತ್ಯವೂ, ಕಾಫಿ, ಟೀ, ಪಾನಿಪುರಿ ಲೋಟಗಳನ್ನು ತಂದು ಎಸೆಯುತ್ತಿದ್ದಾರೆ. ಗಿಡಗಂಟಿಗಳು ಬೆಳೆದು ನಿಂತು ಕಾಲುವೆಯ ಅಸ್ತಿತ್ವವೇ ಕಾಣದಾಗಿದೆ. ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿರುವುದರಿಂದ ಕಾಲುವೆಯಲ್ಲಿ ನೀರು ಹರಿಯದೇ ನಿಂತಲ್ಲೇ ನಿಲ್ಲುತ್ತಿದೆ. ನೀರು ಮಲಿನಗೊಂಡು, ಸೊಳ್ಳೆ, ಕ್ರಿಮಿ-ಕೀಟಗಳ ಆವಸವಾಗುತ್ತಿದೆ. ತ್ಯಾಜ್ಯ ಕೊಳೆತು ವಾಸನೆ ಬರುತ್ತಿದೆ.
ಹೆಸರಘಟ್ಟ ಗ್ರಾಮದ ಒಳಚರಂಡಿ ನೀರನ್ನೂ ಇದೇ ಕಾಲುವೆಗೆ ಬಿಡಲಾಗುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಕೊಳಚೆ ನೀರನ್ನು ಸಂಸ್ಕರಿಸಿ ಬಿಡುವಂತಾಗಬೇಕು ಎಂದು ಸ್ಥಳಿಯರು ಮನವಿ ಮಾಡಿದ್ದಾರೆ.
ಕಾಲುವೆಯು ಜಲ ಮಂಡಳಿ ಸುಪರ್ದಿಗೆ ಬರುತ್ತದೆ. ಈ ಹಿಂದೆ ಕಾಲುವೆಯನ್ನು ಒಮ್ಮೆ ಸ್ವಚ್ಛಗೊಳಿಸಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಗಿಡ ಗಂಟೆಗಳು ಬೆಳೆದು ನಿಂತು, ತ್ಯಾಜ್ಯದಿಂದ ತುಂಬಿರುವ ಕಾಲುವೆಯನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲೀ, ಅಥವಾ ಜಲಮಂಡಳಿ ಅಧಿಕಾರಿಗಳಾಗಲೀ ಸ್ಚಚ್ಛಗೊಳಿಸಬೇಕು ಎಂದು ಸ್ಥಳೀಯರಾದ ನರಸಿಂಹಯ್ಯ ಆಗ್ರಹಿಸಿದ್ದಾರೆ.
ಅಧಿಕಾರಿಗಳು ಏನು ಮಾಡಿದರೂ ಪ್ರಯೋಜನವಿಲ್ಲ. ಜಲಮೂಲ ಉಳಿಸಿಕೊಳ್ಳುವ ಬಗ್ಗೆ ಜನರಿಗೇ ಅರಿವಾಗಬೇಕು. ತ್ಯಾಜ್ಯವನ್ನು ನಿಗದಿತ ಜಾಗದಲ್ಲಿ ಹಾಕಬೇಕು ಎಂದು ಸ್ಥಳೀಯ ನಿವಾಸಿ ಜನಾರ್ದನ್ ಹೇಳಿದರು.
ಕಾಲುವೆಯಲ್ಲಿನ ಗಿಡ ಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಿ ನಂತರ ಸೊಳ್ಳೆಗಳ ಉತ್ಪತ್ತಿ ತಡೆಯಲು ಔಷಧಿ ಸಿಂಪಡಿಸುತ್ತೇವೆ. ಬೀದಿ ಬದಿ ವ್ಯಾಪಾರಿಗಳು ತ್ಯಾಜ್ಯ ಹಾಕಲು ತೊಟ್ಟಿ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ.ರಘು ಮುಖ್ಯ ಎಂಜಿನಿಯರ್ ಬೆಂಗಳೂರು ಜಲ ಮಂಡಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.