ಬೆಂಗಳೂರು: ‘ಎಚ್ಚೆಸ್ವಿ ಕಲ್ಪನೆಯ ಅಕ್ಷಯಪಾತ್ರೆ. ಎಂದಿಗೂ ಬರಿದಾಗದ ಕಲ್ಪನಾಲೋಕ ಅವರದ್ದು’ ಎಂದು ಕವಿ ಬಿ.ಆರ್. ಲಕ್ಷ್ಮಣರಾವ್ ಬಣ್ಣಿಸಿದರು.
ಉಪಾಸನಾ ಟ್ರಸ್ಟ್ ಮತ್ತು ಎಚ್ಚೆಸ್ವಿ ವಿದ್ಯಾರ್ಥಿ ಬಳಗ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ 80ರ ಸಂಭ್ರಮ ‘ಎಚ್ಚೆಸ್ವಿ’ ಕಾವ್ಯ ಸಂಭ್ರಮ–2024 ಕಾರ್ಯಕ್ರಮದಲ್ಲಿ ಗೀತಗುಚ್ಛ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
‘ಎಲ್ಲ ಕವಿಗಳು ಕಲ್ಪನೆಯ ಮೇಲೆಯೇ ಸಾಹಿತ್ಯ ರಚನೆ ಮಾಡುತ್ತಾರೆ. ಈ ಕಲ್ಪನೆಗೆ ಮಿತಿ ಇರುತ್ತದೆ. ಹಾಗಾಗಿ ಒಂದು ಹಂತ ದಾಟಿದಾಗ ಕಲ್ಪನೆಯ ಭಂಡಾರ ಬರಿದಾಗುತ್ತದೆ. ಆದರೆ, ವೆಂಕಟೇಶಮೂರ್ತಿ ಅವರ ಕಲ್ಪನೆಯ ಭಂಡಾರ 40–50 ವರ್ಷಗಳ ಹಿಂದೆ ಇದ್ದಷ್ಟೇ ಈಗಲೂ ಇದೆ’ ಎಂದು ವಿವರಿಸಿದರು.
‘‘ಗೋಕುಲ’, ‘ಬೃಂದಾವನ’, ‘ಕೃಷ್ಣ’, ‘ರಾಧೆ’, ‘ಗೋಪಿಕಾ ಸ್ತ್ರೀಯರು’ ಹೀಗೆ ಎಚ್ಚೆಸ್ವಿ ವಾಸ್ತವದಿಂದ ಹೊರ ಹೋಗಲು ಇಟ್ಟುಕೊಂಡಿರುವ ಪಾತ್ರಧಾರಿಗಳು. ಸಂದರ್ಭ ಬಂದಾಗ ಅವರೇ ಮಕ್ಕಳಾಗುತ್ತಾರೆ. ಕೆಲವೊಂದು ಸಾರಿ ಹರೆಯದ ಯುವಕ-ಯುವತಿಯರಾಗುತ್ತಾರೆ. ಅಲ್ಲಿ ತುಂಟತನವೂ ಇದೆ, ಜಾಣ್ಮೆಯು ಇದೆ. ಪ್ರೀತಿ-ಪ್ರೇಮ, ವಿರಹ, ವೇದನೆ ಎಲ್ಲವೂ ಇದೆ. ಇವೆಲ್ಲವನ್ನು ಒಳಗೊಂಡ ಅದ್ಭುತವಾದ ಭಾವಗೀತೆಗಳನ್ನು ನೀಡಿದ ಕೀರ್ತಿ ಎಚ್ಚೆಸ್ವಿಗೆ ಸಲ್ಲುತ್ತದೆ. ಅಂತಹ ಭಾವಗೀತೆಗಳ ಗುಚ್ಛ ‘ಚಂದ್ರಬನ’ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ’ ಎಂದು ತಿಳಿಸಿದರು.
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೆಂಕಟಾಚಲ ಹೆಗಡೆ ಅವರು ‘ಎಚ್ಚೆಸ್ವಿ ಕಾವ್ಯ ಸಂಭ್ರಮ–2024’ ಕೃತಿ ಬಿಡುಗಡೆ ಮಾಡಿದರು. ಕವಿ ಎಚ್.ಎಸ್. ವೆಂಕಟೇಶಮೂರ್ತಿ, ವಿಮರ್ಶಕ ಎಚ್.ಎಸ್. ಸತ್ಯನಾರಾಯಣ, ಕವಿ ಶ್ರೀನಿವಾಸಮೂರ್ತಿ, ಸುಂದರ ಪ್ರಕಾಶನದ ಇಂದಿರಾ ಸುಂದರ್, ವಿಕ್ರಂ ಪ್ರಕಾಶನದ ಹರಿಪ್ರಸಾದ್, ಪ್ರಿಸಂ ಬುಕ್ಸ್‌ನ ಪ್ರಾಣೇಶ್ ಸಿರಿವರ, ನಟ ಶ್ರೀನಿವಾಸ ಪ್ರಭು, ಉಪಾಸನಾ ಟ್ರಸ್ಟ್‌ನ ಉಪಾಸನಾ ಮೋಹನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.