ADVERTISEMENT

ನಗರದ ರೈಲು ನಿಲ್ದಾಣ: ‘ಅಸುರಕ್ಷತೆ’ ತಾಣ

ಮುಂಬೈ, ಆಂಧ್ರದಿಂದ ಬಂದು ಚಿನ್ನಾಭರಣ ಕಳವು; ರೈಲುಗಳಲ್ಲಿ ಗಾಂಜಾ ಸಾಗಣೆ ಸರಾಗ

ಆದಿತ್ಯ ಕೆ.ಎ
Published 31 ಮಾರ್ಚ್ 2023, 20:16 IST
Last Updated 31 ಮಾರ್ಚ್ 2023, 20:16 IST
ಮಹಾರಾಷ್ಟ್ರ ಹಾಗೂ ತೆಲಂಗಾಣದ ಆರೋಪಿಗಳು ರೈಲಿನಲ್ಲಿ ಬೆಂಗಳೂರಿಗೆ ತರುತ್ತಿದ್ದ ಗಾಂಜಾ
ಮಹಾರಾಷ್ಟ್ರ ಹಾಗೂ ತೆಲಂಗಾಣದ ಆರೋಪಿಗಳು ರೈಲಿನಲ್ಲಿ ಬೆಂಗಳೂರಿಗೆ ತರುತ್ತಿದ್ದ ಗಾಂಜಾ   

ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆ.ಎಸ್‌.ಆರ್‌), ಯಶವಂತಪುರ, ಕೆಂಗೇರಿ, ಬೈಯಪ್ಪನಹಳ್ಳಿ ರೈಲು ನಿಲ್ದಾಣಗಳು ಪ್ರಯಾಣಿಕರ ಪಾಲಿಗೆ ‘ಅಸುರಕ್ಷತೆಯ ತಾಣ’ಗಳಾಗಿವೆ.

ರೈಲು ಪ್ರಯಾಣಿಕರ ಚಿನ್ನಾಭರಣ, ಮೊಬೈಲ್‌ ಸೇರಿದಂತೆ ಬೆಲೆಬಾಳುವ ವಸ್ತುಗಳು ಕಳ್ಳರ ಪಾಲಾಗುತ್ತಿವೆ. ರೈಲುಗಳ ಮೂಲಕ ನಗರಕ್ಕೆ ಹೊರರಾಜ್ಯದಿಂದ ಗಾಂಜಾ ಸರಾಗವಾಗಿ ಪೂರೈಕೆಯಾಗುತ್ತಿದೆ. ರೈಲುಗಳಲ್ಲಿ ಪ್ರಯಾಣ ಮಾಡಲು ಪ್ರಯಾಣಿಕರೇ ಭಯ ಪಡುವ ಸ್ಥಿತಿ ಬಂದಿದೆ.

ಬರೀ ಕಳವು ಪ್ರಕರಣಗಳು ಮಾತ್ರವಲ್ಲ. ಹೊರ ಪ್ರದೇಶದಲ್ಲಿ ಕೊಲೆ ಮಾಡಿ ಮೃತದೇಹಗಳನ್ನು ತಂದು ರೈಲು ನಿಲ್ದಾಣಗಳ ಪ್ಲಾಸ್ಟಿಕ್‌ ಡ್ರಮ್‌ಗಳಿಗೆ ಹಾಕಿ ಹೋಗುತ್ತಿರುವ ಘಟನೆಗಳೂ ನಡೆಯುತ್ತಿವೆ. ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ಇಬ್ಬರು ಮಹಿಳೆಯರ ಮೃತದೇಹ ಪತ್ತೆಯಾಗಿದ್ದವು.

ADVERTISEMENT

ತಮನ್ನಾ ಎಂಬ ಮಹಿಳೆಯನ್ನು ಕೊಲೆ ಮಾಡಿ, ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಮೂಲಕ ಬಿಹಾರಕ್ಕೆ ಸಾಗಿಸಲು ಡ್ರಮ್‌ ಸಹಿತ ಆರೋಪಿಗಳು ಬಂದಿದ್ದರು. ಮೃತದೇಹ, ಡ್ರಮ್‌ ಅನ್ನು ನಿಲ್ದಾಣದಲ್ಲೇ ಬಿಟ್ಟು ತೆರಳಿದ್ದರು. ಅಷ್ಟು ಸುಲಭವಾಗಿ ದುಷ್ಕರ್ಮಿಗಳು ಮೃತದೇಹ ತಂದು ಹಾಕಿದ್ದರಿಂದ ಭದ್ರತೆಯ ಪ್ರಶ್ನೆ ಎದುರಾಗಿದೆ. ತಪಾಸಣೆ ನಡೆಸದೇ ಒಳಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಯಾರು ಬೇಕಾದರೂ ಬಂದು ಹೋಗುವ ಸ್ಥಿತಿಯಿದೆ.

ಕೆಎಸ್‌ಆರ್‌ ಹಾಗೂ ಯಶವಂತಪುರ ರೈಲು ನಿಲ್ದಾಣಕ್ಕೆ ಆಂಧ್ರಪ್ರದೇಶ ಹಾಗೂ ಮುಂಬೈನಿಂದ ಬರುವ ಕಳ್ಳರು ಚಿನ್ನಾಭರಣ, ಮೊಬೈಲ್‌ ದೋಚುತ್ತಿದ್ದಾರೆ. ಮುಂಬೈನ ಅನ್ವರ್‌ ಹುಸೇನ್‌ ಶೇಖ್‌ ಎಂಬಾತನನ್ನು ಮೂರು ದಿನಗಳ ಹಿಂದಷ್ಟೇ ರೈಲ್ವೆ ಪೊಲೀಸರು ಬಂಧಿಸಿದ್ದರು. ಆತ ಒಂದು ವರ್ಷದ ಅವಧಿಯಲ್ಲಿ ರೈಲ್ವೆ ಪ್ರಯಾಣಿಕರಿಂದ ₹ 23 ಲಕ್ಷ ಮೌಲ್ಯದ ಚಿನ್ನಾಭರಣ ಕಸಿದು ಪರಾರಿಯಾಗಿದ್ದ ಎಂದು ರೈಲ್ವೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಮೆಜೆಸ್ಟಿಕ್ ಬಳಿಯ ಲಾಡ್ಜ್‌ವೊಂದರಲ್ಲಿ ಹುಸೇನ್‌ ಒಂದು ತಿಂಗಳು ವಾಸ್ತವ್ಯ ಮಾಡುತ್ತಿದ್ದ. ಎರಡು ದಿನಕ್ಕೊಮ್ಮೆ ಕೆಎಸ್‌ಆರ್‌ ರೈಲು ನಿಲ್ದಾಣಕ್ಕೆ ತೆರಳಿ ಪ್ರಯಾಣಿಕರಿಂದ ಬೆಲೆಬಾಳುವ ವಸ್ತುಗಳನ್ನು ಕಸಿದು ನಾಪತ್ತೆಯಾಗುತ್ತಿದ್ದ. ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಆರೋಪಿ ಪತ್ತೆಯೂ ಸವಾಲಾಗಿತ್ತು. ಕದ್ದ ವಸ್ತುಗಳನ್ನು ಮುಂಬೈನ ಗುಡ್ಡುರಾಮಧನಿ ಸೋನಿ ಎಂಬಾತನಿಗೆ ಮಾರಾಟ ಮಾಡುತ್ತಿದ್ದ.

ಸಂಜೆ ಬಳಿಕ ನೂಕುನುಗ್ಗಲು: ‘ಎರಡೂ ನಿಲ್ದಾಣಗಳಲ್ಲಿ ಸಂಜೆ ಸಮಯದಲ್ಲಿ ಹೆಚ್ಚಿನ ರೈಲು ಬರುತ್ತವೆ. ಆ ವೇಳೆಯಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ. ಈ ಸಮಯ ನೋಡಿಕೊಂಡು ದುಷ್ಕರ್ಮಿಗಳು ಕೃತ್ಯ ಎಸಗುತ್ತಿದ್ದಾರೆ. ಸ್ಲೀಪರ್‌ ಕೋಚ್‌ಗಳಲ್ಲಿ ಹೆಚ್ಚಿನ ಕಳವು ಪ್ರಕರಣಗಳು ಪತ್ತೆಯಾಗುತ್ತಿವೆ. ಬೆಂಗಳೂರು ಮೂಲಕ ಹೊರಡುವ ರೈಲುಗಳಲ್ಲಿ 2020ರಲ್ಲಿ 600, 2021ರಲ್ಲಿ 710 ಹಾಗೂ ಕಳೆದ ವರ್ಷ 900 ವಿವಿಧ ರೀತಿಯ ಪ್ರಕರಣಗಳು ಪತ್ತೆಯಾಗಿದ್ದವು’ ಎಂದು ರೈಲ್ವೆ ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ಯಾಸೆಂಜರ್‌ ರೈಲುಗಳಲ್ಲಿ ಮದ್ಯ ವ್ಯಸನಿಗಳ ಕಾಟ, ಬೋಗಿಗಳಲ್ಲೇ ಇಸ್ಪೀಟ್‌ ಆಡುವುದು ನಡೆಯುತ್ತಿವೆ ಎಂದು ಪ್ರಯಾಣಿಕರು ಅಳಲು ತೋಡಿಕೊಳ್ಳುತ್ತಾರೆ. ಇದರಿಂದ ಮಹಿಳೆಯರು, ಮಕ್ಕಳು ಆತಂಕದಿಂದ ಪ್ರಯಾಣಿಸುವಂತಾಗಿದೆ ಎಂದು ಸವಿತಾ ದೂರಿದರು.

ಕೂಡಿಗೇಹಳ್ಳಿ, ಲೊಟ್ಟೆಗೊಲ್ಲಹಳ್ಳಿ, ಚಿನ್ನಸಂದ್ರ, ಚಿಕ್ಕಬಾಣಾವರ, ವೈಟ್‌ಫೀಲ್ಡ್‌, ಕೆ.ಆರ್‌.ಪುರ, ಬಾಣಸವಾಡಿ ನಿಲ್ದಾಣದಲ್ಲಿ ಪ್ರಯಾಣಿಕರ ಮೊಬೈಲ್‌ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೆ ಆ ಪ್ರದೇಶದಲ್ಲಿ ಸಂಚರಿಸುವ ರೈಲುಗಳ ಬಾಗಿಲು ಬಳಿಯಲ್ಲಿ ನಿಂತಿದ್ದ ಪ್ರಯಾಣಿಕರತ್ತ ದುಷ್ಕರ್ಮಿಗಳು ಕಲ್ಲು ಎಸೆದು, ಮೊಬೈಲ್‌ ಬಿದ್ದ ತಕ್ಷಣ ಅದನ್ನು ಹೊತ್ತೊಯ್ಯುತ್ತಿದ್ದಾರೆ. ವಂದೇ ಭಾರತ್‌ ರೈಲಿಗೆ ಕಲ್ಲು ಎಸೆದ ಪ್ರಕರಣದನಂತರ ಆ ಸ್ಥಳಗಳಲ್ಲಿ ಕಾವಲಿಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಸದ್ಯಕ್ಕೆಕಲ್ಲೆ ಎಸೆಯುವ ಕೃತ್ಯಗಳು ಕಡಿಮೆಯಾಗಿವೆ ಎಂದು ರೈಲ್ವೆ ಪೊಲೀಸರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.