ಬೆಂಗಳೂರು: ತಾಯಿಯ ಚಿನ್ನಾಭರಣಗಳನ್ನೇ ಕಳ್ಳತನ ಮಾಡುತ್ತಿದ್ದ ಆರೋಪದಡಿ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಜಕ್ಕೂರು ಬಡಾವಣೆ ನಿವಾಸಿ ರತ್ನಮ್ಮ ಎಂಬುವರು ಚಿನ್ನಾಭರಣ ಕಳ್ಳತನ ಬಗ್ಗೆ ಈಚೆಗೆ ದೂರು ನೀಡಿದ್ದರು. ಅವರ ಮಗಳು ದೀಪ್ತಿ (24) ಹಾಗೂ ಆಕೆಯ ಪ್ರಿಯಕರ ಅಮೃತಹಳ್ಳಿಯ ಸಿ. ಮದನ್‌ನನ್ನು (27) ಬಂಧಿಸಲಾಗಿದೆ. ಇವರಿಬ್ಬರಿಂದ ₹ 36 ಲಕ್ಷ ಮೌಲ್ಯದ 725 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ರತ್ನಮ್ಮ, ಟೇಲರಿಂಗ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಪತಿಯಿಂದ ವಿಚ್ಛೇದನ ಪಡೆದಿದ್ದ ಮಗಳು ದೀಪ್ತಿ, ಇಬ್ಬರು ಮಕ್ಕಳ ಸಮೇತ ತವರು ಮನೆಗೆ ಬಂದು ತಾಯಿ ಜೊತೆ ವಾಸವಿದ್ದಳು. ಸಣ್ಣಪುಟ್ಟ ಕೆಲಸಕ್ಕೆ ಹೋಗಿ ಬರುತ್ತಿದ್ದಳು’ ಎಂದೂ ತಿಳಿಸಿದರು.
ಚಾಲನೆ ಕಲಿಯಲು ಹೋಗಿ ಸಲುಗೆ: ‘ಪ್ರಕರಣದ ಮತ್ತೊಬ್ಬ ಆರೋಪಿ ಮದನ್, ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದ. ದ್ವಿಚಕ್ರ ವಾಹನ ಹಾಗೂ ಕಾರು ಚಾಲನೆ ಕಲಿಯಲೆಂದು ದೀಪ್ತಿ ಆತನ ಶಾಲೆಗೆ ಹೋಗಿದ್ದರು. ಅಲ್ಲಿಯೇ ಪರಸ್ಪರ ಪರಿಚಯವಾಗಿ ಸಲುಗೆ ಬೆಳೆದು, ಮದನ್ ಜೊತೆ ಹೆಚ್ಚು ಸುತ್ತಾಡಲಾರಂಭಿಸಿ, ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದಳು. ಹೇಗಾದರೂ ಮಾಡಿ ಹೆಚ್ಚು ಹಣ ಸಂಪಾದಿಸಬೇಕೆಂದು ಅಂದು ಕೊಂಡಿದ್ದಳು’ ಎಂದೂ ತಿಳಿಸಿದರು.
ಅಸಲಿ ಜಾಗದಲ್ಲಿ ನಕಲಿ ಚಿನ್ನ: ‘ತಾಯಿ ಬಳಿ ಚಿನ್ನಾಭರಣ ಇರುವ ಸಂಗತಿಯನ್ನು ದೀಪ್ತಿ, ಪ್ರಿಯಕರನಿಗೆ ತಿಳಿಸಿದ್ದಳು. ಇಬ್ಬರೂ ಸೇರಿ ಆಭರಣ ಕಳ್ಳತನ ಮಾಡಲು ಸಂಚು ರೂಪಿಸಿದ್ದರು’ ಎಂದು ಪೊಲೀಸರು ವಿವರಿಸಿದರು.
‘ತಾಯಿ ಬಳಿ ಇರುವ ಚಿನ್ನಾಭರಣ ಮಾದರಿಯಲ್ಲೇ ದೀಪ್ತಿ ನಕಲಿ ಚಿನ್ನಾ ಭರಣ ಮಾಡಿಸಿದ್ದಳು. 950 ಗ್ರಾಂ ಅಸಲಿ ಚಿನ್ನಾಭರಣಗಳನ್ನು ಕದ್ದು, ಅದೇ ಜಾಗದಲ್ಲಿ ನಕಲಿ ಆಭರಣ ಇರಿಸಿದ್ದಳು. ಕದ್ದ ಆಭರಣಗಳನ್ನು ಪ್ರಿಯಕರನಿಗೆ ನೀಡಿದ್ದಳು. ಆಭರಣಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಇಬ್ಬರೂ 3 ಕಾರುಗಳನ್ನ ಖರೀದಿಸಿದ್ದರು. ಅದರಲ್ಲೇ ಜಾಲಿರೈಡ್ ಮಾಡುತ್ತಿದ್ದರು. ಜೊತೆಗೆ, ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಐಷಾರಾಮಿ ಜೀವನ ನಡೆಸಲಾರಂಭಿಸಿದ್ದರು’ ಎಂದೂ ತಿಳಿಸಿದರು.
‘ಮದುವೆ ವೇಳೆ ಕೃತ್ಯ ಬಯಲಿಗೆ’
‘ಇತ್ತೀಚೆಗೆ ಸಂಬಂಧಿಕರೊಬ್ಬರ ಮದುವೆಗೆ ಹೋಗಲೆಂದು ರತ್ನಮ್ಮ ಆಭರಣ ಧರಿಸಲು ಮುಂದಾಗಿದ್ದರು. ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಗಮನಿಸಿದಾಗ, ವ್ಯತ್ಯಾಸ ಕಂಡುಬಂದಿತ್ತು. ಸಮೀಪದ ಆಭರಣ ಮಳಿಗೆಯಲ್ಲಿ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿತ್ತು’ ಎಂದು ಪೊಲೀಸರು ಹೇಳಿದರು.
‘ಮಗಳನ್ನು ವಿಚಾರಿಸಿದಾಗ ತನಗೆ ಗೊತ್ತಿಲ್ಲವೆಂದು ನಾಟಕವಾಡಿದ್ದಳು. ಆದರೆ, ಚಿನ್ನಾಭರಣವಿದ್ದ ಸಂಗತಿ ಆಕೆಗಷ್ಟೇ ಗೊತ್ತಿತ್ತು. ಅದೇ ಅನುಮಾನದಲ್ಲಿ ಮಗಳ ವಿರುದ್ಧ ರತ್ನಮ್ಮ ದೂರು ನೀಡಿದ್ದರು. ವಶಕ್ಕೆ ಪಡೆದು ವಿಚಾರಿಸಿದಾಗ ಮಗಳು ತಪ್ಪೊಪ್ಪಿಕೊಂಡಳು’ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.