ADVERTISEMENT

110 ಹಳ್ಳಿಗಳ ಕನಸು ಸಾಕಾರಕ್ಕೆ ಕೆಲವು ತಿಂಗಳು ಬಾಕಿ

ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಯ ಕೊಳವೆ ಮಾರ್ಗ ಸಿದ್ಧ l ಮೇ ಅಂತ್ಯಕ್ಕೆ ಕಾವೇರಿ ನೀರು ಪೂರೈಕೆ

Published 10 ಅಕ್ಟೋಬರ್ 2022, 19:30 IST
Last Updated 10 ಅಕ್ಟೋಬರ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಸೇರಿಕೊಂಡಿರುವ 110 ಹಳ್ಳಿ ನಿವಾಸಿಗಳ ಕನಸಾಗಿದ್ದ ಕುಡಿಯುವ ನೀರಿನ ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆ ಸಾಕಾರಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಕುಡಿಯುವ ನೀರು ಪೂರೈಕೆ ಮಾರ್ಗ ಪೂರ್ಣಗೊಂಡಿದ್ದು, ಕಾವೇರಿ 5ನೇ ಹಂತ ಪೂರ್ಣಗೊಂಡರೆ ನೀರು ಸರಬರಾಜು ಆರಂಭವಾಗುತ್ತದೆ. ಇನ್ನು ಒಳಚರಂಡಿ ವ್ಯವಸ್ಥೆ ಕೊಳವೆ ಮಾರ್ಗ ಬಹುತೇಕ ಪೂರ್ಣಗೊಂಡಿದ್ದು, ಕೆಲವು ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದ್ದು 2023ರ ಮಾರ್ಚ್‌ ವೇಳೆಗೆ ಮುಗಿಯಲಿವೆ.

ಬಿಬಿಎಂಪಿಯ ಐದು ವಲಯಗಳಲ್ಲಿರುವ 110 ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ 2017ರಲ್ಲಿ ಯೋಜನೆ ಆರಂಭಿಸಲಾಯಿತು. 2018ರಲ್ಲಿ ಒಳಚರಂಡಿ ಯೋಜನೆಗೆ ಚಾಲನೆ ಸಿಕ್ಕಿತು. ಈ ಎರಡೂ ಯೋಜನೆಗಳ ಕಾಮಗಾರಿ ಬಹುತೇಕ ಮುಗಿದಿದೆ. ಹಳ್ಳಿಗಳ ಒಳಚರಂಡಿಯ ಕೊಳವೆ ಮಾರ್ಗವನ್ನು ಮುಖ್ಯ ಮಾರ್ಗಕ್ಕೆ ಸಂಪರ್ಕಿಸುವ ಕಾಮಗಾರಿ ಕೆಲವು ಭಾಗದಲ್ಲಿ ಮಾತ್ರ ಆಗಿದೆ. ಒಳಚರಂಡಿ ನೀರು ಸಂಸ್ಕರಣೆ ಘಟಕಗಳು (ಎಸ್‌ಟಿಪಿ) ಕಾರ್ಯಾರಂಭವಾಗದ ಹೊರತು ಎಲ್ಲೆಡೆಯೂ ಮನೆಗಳ ಒಳಚರಂಡಿ ನೀರಿನ ಸಂಪರ್ಕ ನೀಡುವುದು ಸದ್ಯಕ್ಕೆ ಸಾಧ್ಯವಿಲ್ಲ.

ತೊರೆಕಾಡನಹಳ್ಳಿಯಿಂದ ಹಾರೊಹಳ್ಳಿಯವರೆಗೆ ಕೊಳವೆ ಮಾರ್ಗ ಪೂರ್ಣಗೊಂಡಿದ್ದು, ಎಂಎಸ್ ಪೈಪ್‌ನಲ್ಲಿ ಅಲ್ಟ್ರಾಸೋನಿಕ್‌ ಪರೀಕ್ಷೆಯನ್ನು ಸಹ ಪೂರ್ಣಗೊಳಿಸಲಾಗಿದೆ. ತಾತಗುಣಿಯ ನಂತರದ ಪಂಪ್‌ಸ್ಟೇಷನ್‌ಗಳಿಂದ 110 ಹಳ್ಳಿಗಳಿಗೆ ನೀರನ್ನು ಪಂಪ್‌ ಮಾಡಲಾಗುತ್ತದೆ. ಈ ಪಂಪ್‌ಸ್ಟೇಷನ್‌ ಹಾಗೂ ಜಲಾಗಾರಗಳ ಕಾಮಗಾರಿ ಪೂರ್ಣಗೊಳ್ಳುವುದಷ್ಟೇ ಸದ್ಯಕ್ಕೆ ಬಾಕಿ ಇರುವ ಕಾಮಗಾರಿ.

ADVERTISEMENT

ಜೈಕಾದಿಂದ ಸಾವಿರ ಕೋಟಿ: 110 ಹಳ್ಳಿಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸಂಪರ್ಕಿಸಿ ಅವುಗಳನ್ನು ಎಸ್‌ಟಿಪಿವರೆಗೂ ಕೊಂಡೊಯ್ಯುವ ಯೋಜನೆಗೆ ಜೈಕಾ ಸಂಸ್ಥೆ 2019ರಲ್ಲಿ ಅನುಮೋದನೆ ನೀಡಿತು. ₹1,014 ಕೋಟಿ ವೆಚ್ಚದ ಜಲಮಂಡಳಿಯ ಯೋಜನೆಗೆ 2021ರಲ್ಲಿ ಗುತ್ತಿಗೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯನ್ನು ಆರ್.ಆರ್‌. ನಗರ ಮತ್ತು ದಾಸರಹಳ್ಳಿ ವಲಯ, ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯ ಹಾಗೂ ಬ್ಯಾಟರಾಯನಪುರ ವಲಯ ಎಂದು ಮೂರು ಪ್ಯಾಕೇಜ್‌ ಆಗಿ ವಿಂಗಡಿಸಲಾಗಿದೆ. ಈ ಮೂಲಕ ಒಳಚರಂಡಿ ನೀರನ್ನು ಎಸ್‌ಟಿಪಿವರೆಗೆ ಕೊಂಡೊಯ್ಯಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಒಳಚರಂಡಿ ನೀರನ್ನು ಪಂಪ್‌ ಮಾಡಲು 8 ಮಧ್ಯಂತರ ಒಳಚರಂಡಿ ನೀರಿನ ಜಲಾಗಾರ (ಐಎಸ್‌ಪಿಎಸ್‌) ಸ್ಥಾಪಿಸಲಾಗುತ್ತಿದೆ. 213 ಕಿ.ಮೀಗಳಷ್ಟು ಟ್ರಂಕ್‌ ಸೀವರ್‌ ಅಳವಡಿಸಲಾಗುತ್ತಿದೆ. 14 ತ್ಯಾಜ್ಯ ನೀರು ಸಂಸ್ಕರಣೆ ಘಟಕ (ಎಸ್‌ಟಿಪಿ) ಸ್ಥಾಪಿಸುವುದೂ ಈ ಯೋಜನೆಯಲ್ಲಿದೆ. ಎಲ್ಲ ಎಸ್‌ಟಿಪಿಗಳು ಕೆರೆಗಳ ಪಕ್ಕದಲ್ಲೇ ಇವೆ. ಸಂಸ್ಕರಿಸಿದ ನೀರನ್ನು ಮಾತ್ರ ಕೆರೆಗಳಿಗೆ ಹರಿಸುವುದು ಇದರ ಉದ್ದೇಶ. ಈ ಯೋಜನೆ 2024ಕ್ಕೆ ಮುಗಿಯುವ ನಿರೀಕ್ಷೆ ಇದೆ.

5ನೇ ಹಂತ ಮೇ 2023ಕ್ಕೆ

ಜೈಕಾ ಸಂಸ್ಥೆಯ ₹4 ಸಾವಿರ ಕೋಟಿ ವೆಚ್ಚದ ಕಾವೇರಿ 5ನೇ ಹಂತ ಮೇ 2023ಕ್ಕೆ ಮುಗಿಯಲಿದೆ. 775 ಎಂಎಲ್‌ಡಿ ನೀರನ್ನು ತರಲಾಗುತ್ತಿದೆ. 205 ಕಿ.ಮೀ ಕೊಳವೆ ಮಾರ್ಗವನ್ನು ಅಳವಡಿಸುವ ಕಾಮಗಾರಿ 2019ರಿಂದ ನಡೆಯುತ್ತಿದೆ. ತೊರೆಕಾಡನಹಳ್ಳಿ, ಹಾರೋಹಳ್ಳಿ, ತಾತಗುಣಿ ಮೂರು ಕಡೆ ನೀರು ಸಂಸ್ಕರಣೆ ಘಟಕ (ಡಬ್ಲ್ಯುಟಿಪಿ) ಸ್ಥಾಪಿಸಲಾಗುತ್ತಿದೆ. ಜಲಾಗಾರ, ಪಂಪಿಂಗ್‌ ಸ್ಟೇಷನ್‌ಗಳು ಇದರಲ್ಲಿ ಸೇರಿವೆ. ಈ ಯೋಜನೆ ಸುಮಾರು ಶೇ 70ರಷ್ಟು ಮುಗಿದಿದೆ. ಮಾರ್ಚ್‌ ಅಥವಾ ಏಪ್ರಿಲ್‌ಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ನೀರು ಬಂದರೆ ಮಾತ್ರ 110 ಹಳ್ಳಿಗಳಿಗೆ ನೀರು ಪೂರೈಸಲಾಗುತ್ತಿದೆ. ಏಕೆಂದರೆ ಅಲ್ಲಿಂದ ಬರುವ ನೀರನ್ನು ಪಂಪ್‌ ಸ್ಟೇಷನ್‌ಗಳ ಮೂಲಕ 110 ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತದೆ. ಈ ವ್ಯಾಪ್ತಿಯಲ್ಲಿ ₹900 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಜಲಮಂಡಳಿಯ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್ ಕೆ.ಎನ್‌. ರಾಜೀವ್‌ ತಿಳಿಸಿದರು.

ಎಲ್ಲ ಮುಗಿಯಲು ಇನ್ನೂ ಒಂದು ಸಾವಿರ ಕೋಟಿ ಬೇಕು...

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ರಾಜ್ಯ ಸರ್ಕಾರ 2017ರಲ್ಲಿ ಒಂದು ಸಾವಿರ ಕೋಟಿ ಬಿಡುಗಡೆ ಮಾಡಿತ್ತು. ಈ ಮೊತ್ತಕ್ಕೆ ಅನುಗುಣವಾಗಿ ಮಾತ್ರ ಯೋಜನೆ ಅನುಷ್ಠಾನ ಮಾಡಲು ಸೂಚಿಸಿತ್ತು. ಜಲಸಂಗ್ರಹಗಾರಗಳನ್ನು ನಿರ್ಮಿಸಬೇಕಾಯಿತು. ಅದಕ್ಕೆ ಹಣ ವ್ಯಯವಾಯಿತು. ಹೀಗಾಗಿ, ಕುಡಿಯುವ ನೀರು ಯೋಜನೆಯಲ್ಲಿ 110 ಹಳ್ಳಿಗಳಲ್ಲೂ ಎಲ್ಲ ಕಾಮಗಾರಿ ಮುಗಿದಿಲ್ಲ. ಹತ್ತಾರು ಹಳ್ಳಿಗಳ ವ್ಯಾಪ್ತಿಯಲ್ಲಿ ಕೊಳವೆ ಮಾರ್ಗ ಅಳವಡಿಸಲಾಗಿಲ್ಲ.

2018ರಲ್ಲಿ ಇದೇ ರೀತಿ ಒಳಚರಂಡಿ ವ್ಯವಸ್ಥೆಗೆ ಒಂದು ಸಾವಿರ ಕೋಟಿ ನೀಡಲಾಗಿತ್ತು. 110 ಹಳ್ಳಿಗಳಲ್ಲೂ ಒಳಚರಂಡಿ ಮಾರ್ಗ ಅಳವಡಿಕೆಯಾಗಿಲ್ಲ. ಉತ್ತರ ಹಾಗೂ ಪೂರ್ವಭಾಗದಲ್ಲಿ ಅತಿಹೆಚ್ಚು ಜನಸಂಖ್ಯೆ ಹಾಗೂ ಕ್ಷಿಪ್ರ ಪ್ರಗತಿಯನ್ನು ಹೊಂದಿದೆ. ಹೀಗಾಗಿ ಐದಾರು ಹಳ್ಳಿಗಳಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲಾಗಿಲ್ಲ. ಈ ಯೋಜನೆಯೂ ಮುಗಿದುಹೋಗಿದೆ.

ಈ ಎರಡೂ ಯೋಜನೆಗಳು ಮುಗಿದುಹೋಗಿದ್ದರೂ 110 ಹಳ್ಳಿಗಳಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಜಲಮಂಡಳಿ ‘ಫೇಸ್‌–2’ ಎಂದು ‘ಮಿಸ್ಸಿಂಗ್‌ ಬಿಟ್‌’ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಜಲಮಂಡಳಿ ತಯಾರಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ. ಆದರೆ ಈವರೆಗೆ ರಾಜ್ಯ ಸರ್ಕಾರ ಇದಕ್ಕೆ ಅನುಮೋದನೆ ನೀಡಿಲ್ಲ. ಈ ಯೋಜನೆ ಅನುಷ್ಠಾನವಾದ ಹೊರತು 110 ಹಳ್ಳಿಗಳಲ್ಲಿ ಪೂರ್ಣವಾಗಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಅನುಷ್ಠಾನ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

Caption

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.