ಬೆಂಗಳೂರು: ಆರೋಗ್ಯ ಸಮಸ್ಯೆಯಿಂದ ಚಾಲಕ ಅಸ್ವಸ್ಥಗೊಂಡಿದ್ದರಿಂದ ನಡುರಸ್ತೆಯಲ್ಲಿ ನಿಲ್ಲಿಸಿದ್ದ ಬಿಎಂಟಿಸಿ ಬಸ್ ಅನ್ನು ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ರಾಮಚಂದ್ರಪ್ಪ ಅವರು 1 ಕಿ.ಮೀ.ವರೆಗೆ ಚಲಾಯಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.
ಹಳೇ ಮದ್ರಾಸ್ ರಸ್ತೆಯಲ್ಲಿ ಸೋಮವಾರ ನಡೆದಿರುವ ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಎಸಿಪಿ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರದ ವಿರೋಧ ಪಕ್ಷಗಳ ನಾಯಕರ ಸಭೆ ಪ್ರಯುಕ್ತ ಹಲಸೂರು ಉಪವಿಭಾಗದ ಎಸಿಸಿ ರಾಮಚಂದ್ರಪ್ಪ ಅವರು ಹಳೇ ಮದ್ರಾಸ್ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದರು. ನಾಯಕರ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತಿದ್ದರು. ಭದ್ರತೆ ಜವಾಬ್ದಾರಿ ವಹಿಸಿಕೊಂಡಿದ್ದರು.
ಚಲಿಸುತ್ತಿದ್ದ ಬಸ್‌ನ ಚಾಲಕ, ಏಕಾಏಕಿ ಮೂರ್ಛೆ ಬಿದ್ದು ಅಸ್ವಸ್ಥಗೊಂಡಿದ್ದರು. ಆರೋಗ್ಯ ಸಮಸ್ಯೆ ಅರಿತಿದ್ದ ಚಾಲಕ, ಮೂರ್ಛೆ ಬೀಳುವುದಕ್ಕೂ ಮುನ್ನವೇ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿದ್ದರು.
ಸಹಾಯಕ್ಕೆ ಹೋಗಿದ್ದ ಎಸಿಪಿ ರಾಮಚಂದ್ರಪ್ಪ ಹಾಗೂ ಸಿಬ್ಬಂದಿ, ಚಾಲಕನನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದರು. ನಡುರಸ್ತೆಯಲ್ಲಿ ನಿಲ್ಲಿಸಿದ್ದ ಬಸ್ ಏರಿದ ಎಸಿಪಿ ರಾಮಚಂದ್ರಪ್ಪ, 1 ಕಿ.ಮೀ.ವರೆಗೂ ಚಲಾಯಿಸಿದ್ದರು. ಸುರಕ್ಷಿತ ಸ್ಥಳದಲ್ಲಿ ಬಸ್ ನಿಲ್ಲಿಸಿ ಕೆಳಗೆ ಇಳಿದಿದ್ದರು.
ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಎಸಿಪಿ ಅವರ ಚಾಲನೆ ವಿಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೊವನ್ನು ಹಂಚಿಕೊಂಡಿರುವ ಹಲವರು, ‘ತುರ್ತು ಸಂದರ್ಭದಲ್ಲಿ ಚಾಲಕನನ್ನು ಆಸ್ಪತ್ರೆಗೆ ಸೇರಿಸಿರುವ ರಾಮಚಂದ್ರಪ್ಪ ಅವರು ಇತರೆ ಅಧಿಕಾರಿಗಳಿಗೆ ಮಾದರಿ’ ಎಂದು ಹೊಗಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.