ADVERTISEMENT

ಬೆಂಗಳೂರು: ಸಾಲ ತೀರಿಸಲು ಚಿನ್ನ ಕದ್ದಿದ್ದ ಚಾಲಕ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 16:54 IST
Last Updated 12 ನವೆಂಬರ್ 2024, 16:54 IST
<div class="paragraphs"><p>ಬಂಧನ</p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಸಿಲುಕಿದ್ದ ಆರೋಪಿಯೊಬ್ಬ ಪ್ರಕರಣದ ಸಂಬಂಧ ವಕೀಲರ ಶುಲ್ಕ ಪಾವತಿಸಲು ಮಾಡಿದ್ದ ಸಾಲ ತೀರಿಸಲು ಚಿನ್ನಾಭರಣ ಕಳ್ಳತನ ಮಾಡಿ ಮತ್ತೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ADVERTISEMENT

ಕಳ್ಳತನ ಪ್ರಕರಣದಲ್ಲಿ ಸುಂಕದಕಟ್ಟೆ ನಿವಾಸಿ, ಕ್ಯಾಬ್‌ ಚಾಲಕ ಬಿ.ಎಸ್‌.ಲಿಖಿತ್‌(25) ಎಂಬಾತನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹9 ಲಕ್ಷ ಮೌಲ್ಯದ 126 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

‘ಆರೋಪಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ₹25 ಲಕ್ಷ ವಂಚನೆ ಮಾಡಿದ್ದ. ಕಂಪನಿಯವರು ನೀಡಿದ ದೂರು ಆಧರಿಸಿ, ಲಿಖಿತ್‌ನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ. ಜಾಮೀನು ಪ್ರಕ್ರಿಯೆ ಹಾಗೂ ವಕೀಲರ ಶುಲ್ಕ ಪಾವತಿಗೆಂದು ಆರೋಪಿ ಸಾಲ ಮಾಡಿಕೊಂಡಿದ್ದ. ಸಕಾಲದಲ್ಲಿ ಸಾಲ ತೀರಿಸಲು ಸಾಧ್ಯ ಆಗಿರಲಿಲ್ಲ. ಮಾಡಿದ್ದ ಸಾಲ ತೀರಿಸಲು ಆರೋಪಿ ಕಳ್ಳತನ ಮಾಡಿದ್ದ’ ಎಂದು ಮೂಲಗಳು ಹೇಳಿವೆ. 

‘ವಂಚನೆ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಮೇಲೆ ಆರೋಪಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನ.7ರಂದು ಪ್ರಯಾಣಿಕರೊಬ್ಬರನ್ನು ಚಂದಾಪುರಕ್ಕೆ ಕರೆದೊಯ್ದಿದ್ದ. ಅಲ್ಲಿ ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಳಿಗೆಯೊಂದಕ್ಕೆ ತೆರಳಿ, ಚಿನ್ನದ ಸರ ಹಾಗೂ ಉಂಗುರ ತೋರಿಸುವಂತೆ ಹೇಳಿದ್ದ. ಅಂಗಡಿ ಮಾಲೀಕರು, ಚಿನ್ನದ ಸರ ತೋರಿಸಿದ್ದರು. ಬಳಿಕ ಆರೋಪಿ ಉಂಗುರ ತೋರಿಸುವಂತೆ ಹೇಳಿದ್ದ. ಆಗ ಮಾಲೀಕರು ಉಂಗುರ ತರಲು ಮಳಿಗೆಯ ಒಳಗಡೆಯಿದ್ದ ಕೋಣೆಗೆ ತೆರಳಿದ್ದರು. ಅದೇ ವೇಳೆಯಲ್ಲಿ ಚಿನ್ನಾಭರಣ ಸಹಿತ ಆರೋಪಿ ಪರಾರಿ ಆಗಿದ್ದ’ ಎಂದು ಪೊಲೀಸರು ಹೇಳಿದರು.

‘ಚಿನ್ನಾಭರಣ ಅಂಗಡಿಗೆ ಕದ್ದ ಚಿನ್ನ ಮಾರಾಟ ಮಾಡಲು ಬಂದಿದ್ದ ವೇಳೆ ಆರೋಪಿಯನ್ನು ಬಂಧಿಸಲಾಯಿತು. ಸಾಲ ತೀರಿಸಲು ಕಳ್ಳತನ ಮಾಡುತ್ತಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.