ಬೆಂಗಳೂರು: ಅಪರಾಧ ಪ್ರಕರಣ ವೊಂದರಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆ ಗೊಳಿಸಿದ ನಂತರ ಆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಕರ್ತವ್ಯಲೋಪ ಆರೋಪದಡಿ ₹ 10 ಸಾವಿರ ದಂಡ ವಿಧಿಸಿದ್ದ ಮಾನವ ಹಕ್ಕುಗಳ ಆಯೋಗದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
‘ದೂರಿನ ಅನುಸಾರ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ ನನಗೆ ಆಯೋಗವು ವಿಧಿಸಿರುವ ದಂಡವನ್ನು ರದ್ದುಪಡಿಸಬೇಕು’ ಎಂದು ಕೋರಿ ದೊಡ್ಡಬಳ್ಳಾಪುರದ ಎಸ್.ಟಿ. ಸಿದ್ದಲಿಂಗಪ್ಪ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠವು ಪುರಸ್ಕರಿಸಿದ್ದು, ‘ಆಯೋಗದ ಆದೇಶ ಕಾನೂನು ಬಾಹಿರವಾಗಿದೆ’ ಎಂದು ಹೇಳಿದೆ.
ಪ್ರಕರಣವೇನು?: ‘ಜಮೀನು ಖರೀದಿ ವಿಷಯವೊಂದಕ್ಕೆ ಸಂಬಂಧಿಸಿದಂತೆ ಕಮಿಷನ್ ಹಂಚಿಕೆಯಲ್ಲಿ ಉಂಟಾದ ಜಗಳದಲ್ಲಿ ನಮ್ಮ ಮೇಲೆ ಲಕ್ಷ್ಮೀಕಾಂತ್ ಸೇರಿದಂತೆ 15 ಜನರು ಹಲ್ಲೆ ಮಾಡಿ ದ್ದಾರೆ. ಈ ಬಗ್ಗೆ ದೂರು ದಾಖಲಿಸಬೇಕು’ ಎಂದು ಅಪ್ಪಣ್ಣ ಎಂಬುವರು 2010ರ ಸೆಪ್ಟೆಂಬರ್ 26ರಂದು ಸಿದ್ದಲಿಂಗಪ್ಪ ಅವರಿಗೆ ಫೋನ್ ಮಾಡಿ ರಕ್ಷಣೆ ಕೋರಿದ್ದರು. ಇದರನ್ವಯ ಸಿದ್ದಲಿಂಗಪ್ಪ ಅವರು ಪಿಎಸ್‌ಐ ರಾಜೇಂದ್ರ ಕುಮಾರ್ ಅವರಿಗೆ ದೂರವಾಣಿ ಮುಖಾಂತರವೇ ಕರೆ ಮಾಡಿ ಸೂಕ್ತಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ತನಿಖೆ ನಡೆಸಿದ ಪಿಎಸ್‌ಐ ರಾಜೇಂದ್ರ ಕುಮಾರ್ ಅವರು ಲಕ್ಷ್ಮೀಕಾಂತ್ ಮತ್ತು ಇತರೆ 15 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳಡಿ ಎಫ್‌ಐಆರ್ ದಾಖಲಿಸಿದ್ದರು. ನಂತರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ದೊಡ್ಡಬಳ್ಳಾಪುರ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗಳನ್ನು ಖುಲಾಸೆಗೊಳಿಸಿ 2013ರ ಜುಲೈ 15ರಂದು ಆದೇಶಿಸಿದ್ದರು. ಇದನ್ನು ಪ್ರಶ್ನಿಸಿದ್ದ ಅಪ್ಪಣ್ಣ, ರಾಜೇಂದ್ರ ಕುಮಾರ್ ವಿರುದ್ಧ ಕರ್ತವ್ಯ ಲೋಪದ ಆರೋಪದಡಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ್ದ ಆಯೋಗವು ಐಜಿಪಿ ವಿಚಾರಣೆಗೆ ಆದೇಶಿಸಿತ್ತು. ಐಜಿಪಿ ನೀಡಿದ ವರದಿಯಲ್ಲಿ ರಾಜೇಂದ್ರ ಕುಮಾರ್ ವಿರುದ್ಧವಷ್ಟೇ ಕರ್ತವ್ಯ ಲೋಪ ಎಸಗಿದ ಆರೋಪ ಹೊರಿಸಲಾಗಿತ್ತು. ನಂತರದಲ್ಲಿ ಈ ಪ್ರಕರಣದ ಕುರಿತು ವಿಚಾರಣೆ ಮುಂದುವರಿಸಿದ್ದ ಆಯೋಗವು ರಾಜೇಂದ್ರ ಕುಮಾರ್‌ಗೆ ಮಾತ್ರವಲ್ಲದೇ ಸಿದ್ದಲಿಂಗಪ್ಪ ಅವರಿಗೂ 2015ರ ಜೂನ್ 20ರಂದು ₹ 10 ಸಾವಿರ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಿದ್ದಲಿಂಗಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.