ಬೆಂಗಳೂರು: ‘ಬಿಲ್‌ಗಳ ಬಾಕಿ ಮೊತ್ತ ಪಾವತಿಸಲು ಶೇ 15ರಷ್ಟು ಕಮಿಷನ್ ನೀಡಬೇಕಿದೆ’ ಎಂಬ ಬಿಬಿಎಂಪಿ ಗುತ್ತಿಗೆದಾರರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಕರೆಯಿಸಿಕೊಂಡು ವಿವರಣೆ ಪಡೆದಿದ್ದಾರೆ.
ರಾಜ್ಯಪಾಲರನ್ನು ಇದೇ 8ರಂದು ಭೇಟಿಯಾಗಿದ್ದ ಗುತ್ತಿಗೆದಾರರ ಸಂಘದ ನಿಯೋಗ, ಬಾಕಿ ಮೊತ್ತ ಪಾವತಿಗೆ ವಿಳಂಬವಾಗುತ್ತಿದೆ ಎಂದು ದೂರಿತ್ತಿದ್ದರು.
ತುಷಾರ್ ಗಿರಿನಾಥ್ ಅವರನ್ನ ಗುರುವಾರ ಕರೆಯಿಸಿಕೊಂಡಿದ್ದ ರಾಜ್ಯಪಾಲರು, ವಿಳಂಬಕ್ಕೆ ಕಾರಣವೇನು ಎಂದು ಕೇಳಿದ್ದಾರೆ. ಅದಕ್ಕೆ, ತುಷಾರ್ ನಿಖರ ಮಾಹಿತಿ ನೀಡಿಲ್ಲ ಎಂದು ಗೊತ್ತಾಗಿದೆ.
‘ಬಿಲ್ ಪಾವತಿ ವಿಳಂಬವಾಗುತ್ತಿದೆ. ಅಧಿಕಾರಿಗಳು ಹಣ ಬಿಡುಗಡೆ ಮಾಡುತ್ತಿಲ್ಲ. ದಯವಿಟ್ಟು ತಾವು ಸರ್ಕಾರ, ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಇಲ್ಲದಿದ್ದರೆ ನಮಗೆ ದಯಾಮರಣ ಕೊಡಿಸಿ’ ಎಂದು ಗುತ್ತಿಗೆದಾರರು ರಾಜ್ಯಪಾಲರಲ್ಲಿ ಮನವಿ ಮಾಡಿದ್ದರು. ‘ಶೇ 15ರಷ್ಟು ಕಮಿಷನ್ ನೀಡಿದರೆ ಹಣ ಬಿಡುಗಡೆ ಮಾಡಲಾಗುವುದು ಎಂದು ಕೆಲವರು ಭರವಸೆ ನೀಡುತ್ತಿದ್ದಾರೆ’ ಎಂದೂ ಕೆಲವರು ಅಹವಾಲು ತೋಡಿಕೊಂಡಿದ್ದರು.
ಈ ಎಲ್ಲ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಇನ್ನಷ್ಟು ಮಾಹಿತಿ ಪಡೆದುಕೊಂಡಿದ್ದ ರಾಜ್ಯಪಾಲರು, ‘ಪೂರ್ಣಗೊಂಡ ಕಾಮಗಾರಿಗಳ ಬಿಲ್ ಪಾವತಿಗೆ ಸರ್ಕಾರವೇ ಸೂಚಿಸಿದ್ದರೂ, ಹಣ ಬಿಡುಗಡೆ ಏಕೆ ಆಗಿಲ್ಲ. ಹಣ ಬಿಡುಗಡೆ ಮಾಡದಿರಲು ಸರ್ಕಾರ ಅಥವಾ ಸಚಿವರ ಸೂಚನೆಯೇನಾದರೂ ಇದೆಯೇ’ ಎಂದೂ ಆಯುಕ್ತರನ್ನು ಪ್ರಶ್ನಿಸಿದ್ದಾರೆ.
‘ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ತುಷಾರ್, ಸಾಕಷ್ಟು ಬಾರಿ ಮೌನಕ್ಕೆ ಶರಣಾಗಿದ್ದರು’ ಎಂದು ಮೂಲಗಳು ಹೇಳಿವೆ.
‘ನಿಯಮಾನುಸಾರ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು ಅಥವಾ ಬಿಡುಗಡೆಗೆ ಯಾವುದಾದರೂ ಅಡ್ಡಿ ಇದ್ದರೆ ಅದನ್ನು ಲಿಖಿತವಾಗಿ ನೀಡಬೇಕು ಎಂದು ರಾಜ್ಯಪಾಲರು ಆಯುಕ್ತರಿಗೆ ತಾಕೀತು ಮಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರನ್ನು ಭೇಟಿ ಮಾಡುವ ಮುನ್ನ ತುಷಾರ್ ಗಿರಿನಾಥ್ ಅವರು ಬಿಬಿಎಂಪಿಯ ಎಲ್ಲ ವಿಶೇಷ ಆಯುಕ್ತರು, ಪ್ರಧಾನ ಎಂಜಿನಿಯರ್ ಹಾಗೂ ವಿಭಾಗಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದರು.
ಜನಪ್ರತಿನಿಧಿಗಳಿಗೆ ಮನವಿ: ಗುತ್ತಿಗೆದಾರರ ಸಂಘದ ಸದಸ್ಯರು ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರದ ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡುವ ಅಭಿಯಾನ ಮುಂದುವರಿಸಿದ್ದಾರೆ.
ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, ನಗರದ ಶಾಸಕರಾದ ಆರ್. ಅಶೋಕ, ಬೈರತಿ ಬಸವರಾಜ್, ಎಸ್. ರಘು, ಸಿ.ಕೆ. ರಾಮಮೂರ್ತಿ, ಉದಯ್ ಗರುಡಾಚಾರ್ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಮುಖಂಡರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.