ADVERTISEMENT

ಬೆಂಗಳೂರು | ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ತಾಯಿ, ಮಗಳು!

ಆರೋಪಿ ಸೆರೆ ಹಿಡಿಯಲು ಸ್ಥಳೀಯರ ನೆರವು

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 16:29 IST
Last Updated 2 ಜುಲೈ 2024, 16:29 IST
   

ಬೆಂಗಳೂರು: ವರಸಿದ್ಧಿನಗರದ ಮನೆಯೊಂದರಲ್ಲಿ ಚಿನ್ನಾಭರಣ, ನಗದು ಹಾಗೂ ಆಸ್ತಿ ದಾಖಲೆಗಳನ್ನು ದೋಚಿ ಪರಾರಿಯಾಗಲು ಯತ್ನಿಸಿದ್ದ ಆರೋ‍ಪಿಯನ್ನು ತಾಯಿ–ಮಗಳು 15 ನಿಮಿಷ ತಡೆದು ನಿಲ್ಲಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ವರಸಿದ್ಧಿನಗರದ ನಿವಾಸಿಗಳಾದ ಕಾವ್ಯಶ್ರೀ (29) ಹಾಗೂ ಅವರ ತಾಯಿ ಭಾಗ್ಯ (49) ಅವರು ಸಾಹಸ ತೋರಿದ್ದು, ಕಳ್ಳನನ್ನು ಹಿಡಿಯಲು ಸ್ಥಳೀಯರು ನೆರವಾಗಿದ್ದಾರೆ.

ಕಾವ್ಯಶ್ರೀ ಅವರು ವಿಮಾ ಕಂಪನಿಯ ಉದ್ಯೋಗಿ. ಭಾಗ್ಯ ಅವರು ಗೃಹಿಣಿ. ಕಳವು ಮಾಡಲು ಯತ್ನಿಸಿದ ರಾಜಾಜಿನಗರದ ಲೋಕನಾಥ್‌ ಎಂಬಾತನನ್ನು ಬ್ಯಾಡರಹಳ್ಳಿ ಠಾಣೆಗೆ ಒಪ್ಪಿಸಲಾಗಿದೆ.

ADVERTISEMENT

‘ತಂಬಾಕು ಉತ್ಪನ್ನಗಳ ವಿತರಕರಾಗಿ ಕೆಲಸ ಮಾಡುತ್ತಿದ್ದ ಕಾವ್ಯಶ್ರೀ ಅವರ ತಂದೆ, ಜೂನ್‌ 26ರಂದು ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಕಾವ್ಯಶ್ರೀ  ಮನೆಯಲ್ಲಿದ್ದರು. ತಾಯಿ ಹಾಗೂ ಮಗಳು ಮಹಡಿಯಲ್ಲಿ ಬಟ್ಟೆಗಳನ್ನು ಒಣಗಿಸಲು ಹಾಕುವುದಕ್ಕೆ ಮನೆಯ ಬಾಗಿಲು ಹಾಕಿ ತೆರಳಿದ್ದರು. ಅದೇ ಸಂದರ್ಭದಲ್ಲಿ ಕಳ್ಳ ಮನೆ ಪ್ರವೇಶಿಸಿದ್ದ. ವಾಪಸ್ ಬಂದಾಗ ಬಾಗಿಲು ತೆರೆದಿರುವುದನ್ನು ಕಂಡ ಕಾವ್ಯಶ್ರೀ ಗಾಬರಿಗೊಂಡರು. ವ್ಯಕ್ತಿಯೊಬ್ಬ ಮನೆ ಒಳಗಿದ್ದು ಜಾಕೆಟ್‌ನಲ್ಲಿ ಚಿನ್ನಾಭರಣವನ್ನು ಬಚ್ಚಿಟ್ಟುಕೊಂಡಿರುವುದನ್ನು ಗಮನಿಸಿದ್ದರು. ಒಳಗೆ ಪ್ರವೇಶಿಸಿ ಕಳ್ಳನ ಜಾಕೆಟ್‌ ಅನ್ನು ಹಿಡಿದುಕೊಂಡರು. ಜೋರಾಗಿ ಕಿರುಚಿದ್ದರಿಂದ ತಾಯಿ ಸಹ ನೆರವಿಗೆ ಬಂದರು’ ಎಂದು ಮೂಲಗಳು ತಿಳಿಸಿವೆ.

ಕಳ್ಳನನ್ನು ಸುಮಾರು 15 ನಿಮಿಷ ತಡೆದು ನಿಲ್ಲಿಸಿದ್ದರು. ಕಳ್ಳ ಪರಾರಿಯಾಗಲು ಯತ್ನಿಸಿದರೂ ಅವಕಾಶ ನೀಡಿರಲಿಲ್ಲ. ಅಷ್ಟರಲ್ಲಿ ಮನೆ ಮಾಲೀಕರು ಸೇರಿ ಅಕ್ಕಪಕ್ಕದ ನಿವಾಸಿಗಳು ನೆರವಿಗೆ ಬಂದಿದ್ದರು. ಕಾವ್ಯಶ್ರೀ ಅವರು ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿದ ಬಳಿಕ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದರು.

ಕಳ್ಳ ತಪ್ಪಿಸಿಕೊಳ್ಳಲು ಎಳೆದಾಡಿದಾಗ ಕಾವ್ಯಶ್ರೀ ಅವರಿಗೆ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ಎರಡೂ ಬಾಗಿಲುಗಳನ್ನು ಬಂದ್ ಮಾಡಿ ಕಳ್ಳನನ್ನು ಸೆರೆ ಹಿಡಿಯಲಾಗಿದೆ ಎಂದು ಕಾವ್ಯಶ್ರೀ ಅವರ ತಂದೆ ನಿಂಗಯ್ಯ ಹೇಳಿದ್ದಾರೆ.

ಚಿನ್ನಾಭರಣ, ಆಸ್ತಿ ಪತ್ರಗಳು ಸಿಕ್ಕಿವೆ. ಆದರೆ, ₹12 ಸಾವಿರ ನಗದು ಕಳವು ಆಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ನಡೆಸಿದ್ದಾರೆ.

‘ನಿಂಗಯ್ಯ ಅವರ ಮನೆಯಿಂದ ಆಸ್ತಿ ಪತ್ರ ಕಳವು ಮಾಡುವಂತೆ ಬೀಡಾ ಸ್ಟಾಲ್‌ ಮಾಲೀಕರೊಬ್ಬರು ಸೂಚಿಸಿದ್ದರು. ಅವರ ಸೂಚನೆ ಮೇರೆಗೆ ಮನೆಗೆ ನುಗ್ಗಿದ್ದಾಗಿ ಕಳ್ಳ ಹೇಳಿದ್ದಾನೆ. ಆತ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.