ಬೆಂಗಳೂರು: ಆಗುಂಬೆಯ ಕಾಳಿಂಗ ಫೌಂಡೇಷನ್ ಮುಖ್ಯಸ್ಥ ಗೌರಿಶಂಕರ್ ಮತ್ತು ತಂಡ ಪತ್ತೆ ಮಾಡಿರುವ ಕಾಳಿಂಗ ಸರ್ಪದ ಹೊಸ ಪ್ರಭೇದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ‘ಒಫಿಯೊಫೇಗಸ್ ಕಾಳಿಂಗ’ ಎಂದು ನಾಮಕರಣ ಮಾಡಿ, ಘೋಷಿಸಿದರು.
ನಂತರ ಮಾತನಾಡಿದ ಅವರು, ‘ಜಗತ್ತಿನಲ್ಲಿರುವುದು ಕಾಳಿಂಗ ಸರ್ಪದ ಒಂದೇ ಪ್ರಭೇದವಲ್ಲ, ಇನ್ನೂ ಮೂರು ಪ್ರಭೇದಗಳಿವೆ ಎಂದು ಗೌರಿಶಂಕರ್ ಮತ್ತು ತಂಡ ಸಂಶೋಧನೆ ಮಾಡಿ ಗುರುತಿಸಿದ್ದಾರೆ. ಅದಕ್ಕೆ ಹೊಸ ಹೆಸರಿಡಲಾಗಿದೆ. ಇನ್ನು ಮುಂದೆ ಕರ್ನಾಟಕದ ಕಾಳಿಂಗ ಸರ್ಪ ಪ್ರಭೇದವನ್ನು ವಿಶ್ವದಾದ್ಯಂತ ‘ಓಪಿಯೊಫೇಗಸ್ ಕಾಳಿಂಗ’ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಇದು ನಮ್ಮ ನಾಡಿಗೇ ಹೆಮ್ಮೆಯ ಸಂಗತಿ’ ಎಂದು ಶ್ಲಾಘಿಸಿದರು.
‘ಇಂಥ ಪ್ರಭೇದಗಳ ಸಂಶೋಧನೆ ಜೊತೆಗೆ, ಸಂರಕ್ಷಣೆ ಕೂಡ ಆಗಬೇಕು. ಆಗ, ಯಾವ ಸರ್ಪ ಕಚ್ಚಿದರೆ, ಯಾವ ವಿಷ ನಿರೋಧಕ ಔಷಧಿ ಕೊಡಬೇಕೆಂಬುದು ತಿಳಿಯಬಹುದು. ಈ ಮೂಲಕ ಅಮೂಲ್ಯವಾದ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಈ ತಂಡ ನಾಡು ಹೆಮ್ಮೆಪಡುವಂತಹ ಸಂಶೋಧನೆ ಮಾಡಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಈ ಕುರಿತು ಸಂಶೋಧನೆ ನಡೆಸಲು ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ. ಈ ಸಂಶೋಧನೆಯನ್ನು ಬಳಸಿಕೊಂಡು, ಹಾವು ಕಡಿತಕ್ಕೆ ಚಿಕಿತ್ಸೆ ನೀಡಲು ಬಳಸುವ ವಿಷ ನಿರೋಧಕ ಔಷಧಿ ತಯಾರಿಸುವಂತಹ ಕೆಲಸಗಳನ್ನು ಮಾಡುವುದಿದ್ದರೂ, ಸರ್ಕಾರ ನೆರವು ನೀಡಲು ಸಿದ್ಧವಿದೆ’ ಎಂದು ಭರವಸೆ ನೀಡಿದರು.
ಕಾಳಿಂಗ ಫೌಂಡೇಷನ್ ಮುಖ್ಯಸ್ಥ ಹಾಗೂ ಹೊಸ ಪ್ರಭೇದಗಳ ಸಂಶೋಧಕ ಗೌರಿಶಂಕರ, 12 ವರ್ಷಗಳ ಸಂಶೋಧನೆ ಕುರಿತು ಅನುಭವ ಹಂಚಿಕೊಂಡರು.
ಮಾಜಿ ಶಾಸಕ ಕಿಮ್ಮನೆ ರತ್ನಾಕರ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಕೆ. ಮಾಲ್ಖಡೆ, ಐಐಎಸ್‌ಸಿ ವಿಜ್ಞಾನಿ ಕಾರ್ತಿಕ್ ಶಂಕರ್ ಮಾತನಾಡಿದರು. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಆರ್. ಮಂಜುನಾಥ ಗೌಡ, ನಟ ವಿನಯ್ ರಾಜಕುಮಾರ್, ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಭಾಗವಹಿಸಿದ್ದರು.
‘ಪ್ರಸ್ತುತ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಹಾವು ಕಡಿತಕ್ಕೆ ಚಿಕಿತ್ಸೆ (ಆಂಟಿ ವಿನೋಮ್) ಲಭ್ಯವಿದೆ. ಎಲ್ಲ ಹಂತದ ಆಸ್ಪತ್ರೆಗಳಲ್ಲೂ ಈ ಚಿಕಿತ್ಸೆ ಇರಬೇಕೆಂದು ಸೂಚನೆ ಕೊಟ್ಟಿದ್ದೇವೆ’ ಎಂದು ಈಶ್ವರ ಖಂಡ್ರೆ ಹೇಳಿದರು. ‘ಔಷಧ ಲಭ್ಯವಿದ್ದರೆ ಸಾಲದು. ಜನರಲ್ಲಿ ಹಾವು ಕಚ್ಚಿದ ನಂತರ ಔಷಧ ಪಡೆಯುವ ಕುರಿತು ಜಾಗೃತಿ ಮೂಡಿಸಬೇಕಿದೆ’ ಎಂದು ತಿಳಿಸಿದರು.
‘ದೇಶದಲ್ಲಿ ವರ್ಷಕ್ಕೆ 58 ಸಾವಿರ ಜನ ಹಾವು ಕಡಿತದಿಂದ ಮೃತಪಡುತ್ತಾರೆ. 10 ಲಕ್ಷಕ್ಕಿಂತಲೂ ಹೆಚ್ಚು ಹಾವು ಕಡಿತ ಪ್ರಕರಣಗಳು ದಾಖಲಾಗುತ್ತವೆ. ರಾಜ್ಯದಲ್ಲಿ 50ರಿಂದ 60 ಮಂದಿ ಹಾವು ಕಚ್ಚಿ ಸಾಯಬಹುದು. ಹೀಗೆ ಹೊಸ ಪ್ರಭೇದಗಳ ಸಂಶೋಧನೆಗಳು ವಿಷ ನಿರೋಧಕ ಔಷಧಿ ತಯಾರಿಸಲು ಸಹಾಯವಾಗುತ್ತವೆ. ಯಾವ ಹಾವು ಕಚ್ಚಿದರೆ ಯಾವ ಔಷಧ ಕೊಡಬಹುದು ಎಂಬುದನ್ನು ಪತ್ತೆ ಮಾಡಬಹುದು. ಇದರಿಂದ ಜೀವಗಳನ್ನು ಉಳಿಸಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.