ADVERTISEMENT

ಜಯಮಹಲ್‌ ರಸ್ತೆ, ಬಳ್ಳಾರಿ ರಸ್ತೆ ಅಭಿವೃದ್ಧಿ; ಟಿಡಿಆರ್ ನೀಡದ ನಿರ್ಧಾರಕ್ಕೆ ಬದ್ಧ?

ಜಯಮಹಲ್‌ ರಸ್ತೆ, ಬಳ್ಳಾರಿ ರಸ್ತೆ ಅಭಿವೃದ್ಧಿಗೆ ಅರಮನೆ ಜಾಗ ಸ್ವಾಧೀನ ಪ್ರಕರಣದ ವಿಚಾರಣೆ ಇಂದು

​ಪ್ರಜಾವಾಣಿ ವಾರ್ತೆ
Published 16 ಮೇ 2022, 19:32 IST
Last Updated 16 ಮೇ 2022, 19:32 IST
 ಜಯಮಹಲ್‌ ರಸ್ತೆ, ಬಳ್ಳಾರಿ ರಸ್ತೆ
ಜಯಮಹಲ್‌ ರಸ್ತೆ, ಬಳ್ಳಾರಿ ರಸ್ತೆ    

ಬೆಂಗಳೂರು: ಜಯಮಹಲ್‌ ರಸ್ತೆ ಹಾಗೂ ಬಳ್ಳಾರಿ ರಸ್ತೆಗಳನ್ನು ವಿಸ್ತರಿಸುವುದಕ್ಕೆ ಅರಮನೆ ಮೈದಾನದ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದ ವ್ಯಾಜ್ಯದ ವಿಚಾರಣೆ ಇದೇ ಮಂಗಳವಾರ (ಮೇ 17) ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಈ ರಸ್ತೆಗಳ ವಿಸ್ತರಣೆಗೆ ಅರಮನೆ ಮೈದಾನದ ಜಾಗವನ್ನು ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ನೀಡಿ ಸ್ವಾಧೀನ ಪಡಿಸಿಕೊಳ್ಳಲು ಒಪ್ಪದಿರುವ ತನ್ನ ನಿಲುವಿಗೆ ಬದ್ಧವಾಗಿರಲು ಸರ್ಕಾರ ನಿರ್ಧರಿಸಿದೆ.

ಈ ರಸ್ತೆ ವಿಸ್ತರಣೆಗೆ ಟಿಡಿಆರ್‌ ನೀಡಲು ಮೊದಲು ಸರ್ಕಾರಒಪ್ಪಿತ್ತು. ಈ ಪ್ರಕರಣದಲ್ಲಿ ಟಿಡಿಆರ್‌ ನೀಡುವುದಕ್ಕೆ ತಾಂತ್ರಿಕ ಅಡಚಣೆಗಳಿವೆ ಎಂಬ ಕಾರಣಕ್ಕೆ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿನಡೆದ ಸಭೆಯಲ್ಲಿ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರೂ ಈ ರಸ್ತೆಗಳ ವಿಸ್ತರಣೆಗೆ ಟಿಡಿಆರ್‌ ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯ ನೀಡಿದ್ದಾರೆ ಎಂದು ಗೊತ್ತಾಗಿದೆ.

ಜಯಮಹಲ್‌ ರಸ್ತೆಯನ್ನು ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್‌ ರೈಲು ನಿಲ್ದಾಣದವರೆಗೆ ಹಾಗೂ ಬಳ್ಳಾರಿ ರಸ್ತೆಯನ್ನು ಬಿಡಿಎ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ವಿಸ್ತರಿಸಲು ಬಿಬಿಎಂಪಿ 2009ರಲ್ಲೇ ಯೋಜನೆ ರೂಪಿಸಿತ್ತು. ಈ ಕಾಮಗಾರಿಗಳಿಗೆ ಅರಮನೆ ಮೈದಾನದ ಆಸ್ತಿಯಲ್ಲಿ 15 ಎಕರೆ 39 ಗುಂಟೆ ಜಾಗದ ಅವಶ್ಯಕತೆ ಇದೆ.

ADVERTISEMENT

ಈ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಳ್ಳಲು ಟಿಡಿಆರ್‌ ನೀಡುವ ಪ್ರಸ್ತಾಪವನ್ನು ಬಿಬಿಎಂಪಿಯ ಹಿಂದಿನ ಆಯುಕ್ತರೊಬ್ಬರು ಅರಮನೆಯ ಮಾಲೀಕತ್ವದ ಕುರಿತಂತೆ ಹೈಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಮೈಸೂರು ರಾಜವಂಶಸ್ಥರ ಮುಂದಿಟ್ಟಿದ್ದರು. ಎರಡೂ ಕಡೆಯವರು ಒಪ್ಪಿದ್ದರಿಂದ ರಸ್ತೆ ವಿಸ್ತರಣೆಗೆ ಬೇಕಾದ ಜಾಗವನ್ನು ಟಿಡಿಆರ್‌ ನೀಡಿ ಸ್ವಾಧೀನಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟಿಡಿಆರ್‌ ನೀಡಿ ರಸ್ತೆ ವಿಸ್ತರಣೆ ಕಾಮಗಾರಿಗೆ ಅಗತ್ಯವಿರುವ ಜಾಗ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸಚಿವ ಸಂಪುಟವು 2019ರಲ್ಲಿ ಹಸಿರು ನಿಶಾನೆಯನ್ನೂ
ತೋರಿಸಿತ್ತು.

ಟಿಡಿಆರ್‌ ನೀಡಿ ಜಾಗ ಸ್ವಾಧೀನಪಡಿಸಿಕೊಳ್ಳುವುದು ಸರ್ಕಾರದ ಹಿತಾಸಕ್ತಿಯಿಂದ ಒಳ್ಳೆಯದಲ್ಲ. ಇದು ಅನೇಕ ತಾಂತ್ರಿಕ ಸಮಸ್ಯೆಗಳನ್ನು ತಂದೊಡ್ಡಲಿದೆ ಎಂದು 2021ರ ಫೆ. 15ರಂದು ಆಗಿನ ಬಿಬಿಎಂಪಿಯ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವಿವರವಾದ ಪತ್ರ ಬರೆದಿದ್ದರು. ಬಳಿಕ ಭೂಸ್ವಾಧೀನ ನಡೆಸಲು ಟಿಡಿಆರ್‌ ನೀಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.