ಬೆಂಗಳೂರು: ‘ರಾಜಧಾನಿಯಲ್ಲಿ ಪ್ರಯಾಣಿಕರ ಮೇಲೆ ಆಟೊ ಚಾಲಕರ ದೌರ್ಜನ್ಯ ಹಾಗೂ ಕಿರಿಕಿರಿ ಮಿತಿಮೀರಿದೆ’ ಎಂಬ ಆರೋಪ ವ್ಯಕ್ತವಾದ ಬೆನ್ನಲ್ಲೇ ನಗರದ ಸಂಚಾರ ಪೊಲೀಸರು, ಚಾಲಕರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಒಂಬತ್ತು ತಿಂಗಳಲ್ಲೇ ಆಟೊ ಚಾಲಕರ ವಿರುದ್ಧ ವಿವಿಧ ಸಂಚಾರ ಠಾಣೆಗಳಲ್ಲಿ 6,137 ಪ್ರಕರಣಗಳು ದಾಖಲಾಗಿವೆ.
ಪ್ರಯಾಣಿಕರು ಕರೆದಿದ್ದ ಸ್ಥಳಕ್ಕೆ ಹೋಗದಿರುವುದು, ನಿಗದಿಗಿಂತ ಹೆಚ್ಚಿನ ಬಾಡಿಗೆ ಕೇಳುತ್ತಿರುವುದು, ಪ್ರಯಾಣಿಕರನ್ನು ಕರೆದೊಯ್ದು ಮೊಬೈಲ್, ನಗದು ಸುಲಿಗೆ ನಡೆಸುತ್ತಿರುವಂತಹ ಪ್ರಕರಣಗಳು ದಾಖಲಾಗುತ್ತಿವೆ. ಇನ್ನೂ ಕೆಲವು ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಅಡ್ಡಗಟ್ಟಿ ಆಟೊ ಚಾಲಕರು ಕಿರುಕುಳ ನೀಡುತ್ತಿದ್ದಾರೆ. ಆ ಸಂಬಂಧವೂ ಹೆಚ್ಚಿನ ದೂರುಗಳು ಬಂದಿವೆ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಆಟೊದಲ್ಲಿ ಪ್ರಯಾಣಿಸುವರಿಗೆ ಚಾಕು ತೋರಿಸಿ ಹಣ, ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಆಟೊ ಚಾಲಕರನ್ನು ಇತ್ತೀಚೆಗೆ ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದರು. ಇಬ್ಬರು ಚಾಲಕರನ್ನು ವಿಚಾರಣೆಗೆ ಒಳಪಡಿಸಿದಾಗ ಇದೇ ರೀತಿ ಹಲವು ಕೃತ್ಯಗಳಲ್ಲಿ ಭಾಗಿ ಆಗಿರುವುದು ಗೊತ್ತಾಗಿತ್ತು.
ಕಳೆದ 15 ದಿನಗಳಲ್ಲಿ ಇಬ್ಬರು ಯುವತಿಯರಿಗೆ ಆಟೊ ಚಾಲಕರು ನಿಂದಿಸಿದ್ದರು. ನಿಂದನೆ ಮಾಡುತ್ತಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅದನ್ನು ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಚೆನ್ನೈನ ಯುವತಿಯೊಬ್ಬರು ಕಳೆದ ವಾರ ಸಿಲ್ಕ್ ಬೋರ್ಡ್‌ಗೆ ಬಂದಿದ್ದರು. ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಬರುವುದು ತಡವಾಗಿತ್ತು. ಅದೇ ವೇಳೆಗೆ ಬಂದ ಆಟೊ ಚಾಲಕ, ಕ್ಯಾಬ್ ದರ ₹300ಕ್ಕೆ ಕರೆದೊಯ್ಯುವುದಾಗಿ ಹೇಳಿಕೊಂಡಿದ್ದ. ಯುವತಿ ಒಪ್ಪಿ, ಆಟೊ ಹತ್ತಿದ್ದರು. ಚಾಲಕ ಮೀಟರ್ ಹಾಕಿದ್ದ. ಸ್ವಲ್ಪ ದೂರ ಪ್ರಯಾಣಿಸಿದ ಮೇಲೆ ಮೀಟರ್‌ನಲ್ಲಿ ₹340 ತೋರಿಸುತ್ತಿತ್ತು. ಇದರಿಂದ ಗಾಬರಿಗೊಂಡಿದ್ದ ಯುವತಿ, ‘ಮೊದಲು ಹೇಳಿದಷ್ಟು ದರ ಮಾತ್ರ ನೀಡುತ್ತೇನೆ’ ಎಂದಾಗ ಮೀಟರ್‌ಗಿಂತ ಒಂದೂವರೆ ಪಟ್ಟು ಹೆಚ್ಚು ಹಣ ಪಾವತಿಸಬೇಕು ಎಂದು ಬೆದರಿಸಿದ್ದ. ಆಕೆ ನಿರಾಕರಿಸಿದಾಗ ಅವಾಚ್ಯ ಶಬ್ದಗಳಿಂದ ಚಾಲಕ ‘ಗುಡ್ಡೆ’ ಭರತ್ ನಿಂದಿಸಿದ್ದ. ವಿಡಿಯೊ ಆಧರಿಸಿ ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದು ಸಂಚಾರ ಪೊಲೀಸರು ಹೇಳಿದರು.
ಮಾರತ್‌ಹಳ್ಳಿಯ ಯಮಲೂರು ಸಿಗ್ನಲ್ ಬಳಿ ಕಾರು ಚಾಲಕನ ಮುಖಕ್ಕೆ ಉಗಿದಿದ್ದ ಆಟೊ ಚಾಲಕ ಯಮಲೂರಿನ ಕಿರಣ್ ಎಂಬಾತನನ್ನು ಎಚ್‌ಎಎಲ್ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದರು.
ಅಲ್ಲಿಗೆ ಬರೋಲ್ಲಾ ಕಣ್ರಿ...
ಮೆಜೆಸ್ಟಿಕ್ ಜಾಲಹಳ್ಳಿ ಕ್ರಾಸ್ ಎಂಟನೇ ಮೈಲು ಕೆಂಗೇರಿಗಳಲ್ಲಿ ಮಧ್ಯರಾತ್ರಿ ಯಾರಾದರೂ ಬಂದು ಆಟೊ ವಿಚಾರಿಸಿದರೆ ‘ಮೀಟರ್ ಮೇಲೆ ದುಪ್ಪಟ್ಟು ಹಣ ಕೊಡಿ’ ‘ಕತ್ರಿಗುಪ್ಪೆಗೆ ಬರೋಲ್ಲಾ ಕಣ್ರಿ...’ ‘ಗಂಗಮ್ಮನ ಗುಡಿ ವೃತ್ತ’ಕ್ಕೆ ಬರೋದಿಲ್ಲ ಎಂದು ಆಟೊ ಚಾಲಕರು ಹೇಳಿ ನಿಯಮ ಉಲ್ಲಂಘನೆ ಮಾಡುತ್ತಿರುವುದು ಸಾಮಾನ್ಯವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಈ ರೀತಿ ಹೇಳಿಕೆ ನೀಡುವ ಚಾಲಕರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಮಧ್ಯರಾತ್ರಿಯೂ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಕೆಲವರಿಂದ ನಿಷ್ಠಾವಂತ ಚಾಲಕರಿಗೂ ಸಮಸ್ಯೆ ಆಗುತ್ತಿದೆ. ತಪ್ಪಿತಸ್ಥ ಚಾಲಕರ ಬಗ್ಗೆ ನಾವೇ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದೇವೆ.-ನವೀನ್ ಆಟೊ ಚಾಲಕ ಮೆಜೆಸ್ಟಿಕ್
ನಿಯಮ ಉಲ್ಲಂಘನೆ ಸಂಬಂಧ ಇತ್ತೀಚೆಗೆ ಆಟೊ ಚಾಲಕರ ವಿರುದ್ದ ಹೆಚ್ಚಿನ ದೂರುಗಳು ಬರುತ್ತಿವೆ. ಕಾರ್ಯಾಚರಣೆ ಮುಂದುವರೆಯಲಿದೆ.-ಎಂ.ಎನ್.ಅನುಚೇತ್, ಜಂಟಿ ಪೊಲೀಸ್ ಕಮಿಷನರ್ ಸಂಚಾರ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.