ಬೆಂಗಳೂರು: ‘ದಿ ರಾಮೇಶ್ವರ ಕೆಫೆ’ಯಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರಾದ ಮುಸಾವೀರ್ ಹುಸೇನ್ ಶಾಜೀದ್ ಹಾಗೂ ಅಬ್ದುಲ್ ಮಥೀನ್ ಅಹ್ಮದ್ ತಾಹಾ ವಿರುದ್ಧ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಎನ್‌ಐಎ ಮತ್ತೊಂದು ದೋಷಾರೋಪ ಪಟ್ಟಿ ಸಲ್ಲಿಸಿದೆ.
‘ಶಿವಮೊಗ್ಗ ಮಾದರಿಯ ಐಎಸ್ ಸಂಚು ಪ್ರಕರಣ’ದಲ್ಲಿಯೂ ಈ ಇಬ್ಬರು ಶಂಕಿತರು ಪಾತ್ರವಿರುವುದು ತನಿಖೆಯಿಂದ ದೃಢಪಟ್ಟಿದೆ ಎಂಬುದಾಗಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಶಿವಮೊಗ್ಗ ಮಾದರಿ ಪ್ರಕರಣದಲ್ಲಿ ಇದುವರೆಗೂ 10 ಮಂದಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಬೆಂಗಳೂರಿನ ಅಲ್–ಹಿಂದ್ ಐಎಸ್ ಮಾದರಿ ಪ್ರಕರಣದಲ್ಲೂ ಅಬ್ದುಲ್ ಮತೀನ್ ಅಹ್ಮದ್ ತಾಹಾ ಹಾಗೂ ಮಸ್ಸಾವೀರ್ ಹುಸೇನ್ ಶಾಜಿಬ್ ವಿರುದ್ಧ (ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ) ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಇಬ್ಬರು ಶಂಕಿತರು, ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆಯ ಜತೆ ನಂಟು ಹೊಂದಿದ್ದರು. ಸಿರಿಯಾದಲ್ಲಿ ಐಎಸ್ ವಶದಲ್ಲಿರುವ ಪ್ರದೇಶಕ್ಕೆ ವಲಸೆ ಹೋಗಲು ಈ ಹಿಂದೆ ಪ್ರಯತ್ನಿಸಿದ್ದರು. ಮುಸ್ಲಿಂ ಯುವಕರನ್ನು ಪ್ರಚೋದಿಸಿ ಐಎಸ್ ಸಿದ್ಧಾಂತದತ್ತ ಸೆಳೆಯುವ ಕೆಲಸ ಮಾಡುತ್ತಿದ್ದರು’ ಎಂದು ತನಿಖಾ ಮೂಲಗಳು ತಿಳಿಸಿವೆ.
‘ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಸಂಚು ರೂಪಿಸುವುದು, ತನ್ನ ಸಂಘಟನೆಗೆ ಮುಸ್ಲಿಂ ಯುವಕರ ನೇಮಕ, ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹ, ಭಾರತೀಯ ರಾಷ್ಟ್ರಧ್ವಜ ಸುಡುವುದು, ಪ್ರಯೋಗ ಸ್ಫೋಟ ಸೇರಿದಂತೆ ಮತ್ತಿತರ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಶಂಕಿತರು ಭಾಗಿಯಾಗಿದ್ದರು. 2022ರ ಸೆಪ್ಟೆಂಬರ್ 19ರಂದು ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಸಂಚಿನ ಕುರಿತು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.
‘ಶಿವಮೊಗ್ಗದ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ, ಮೂರನೇ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ’ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.