ADVERTISEMENT

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ‘ಎಲ್‌ಇಟಿ’ ಶಂಕಿತ ಬಂಧನ

ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಚೋಟು:

​ಪ್ರಜಾವಾಣಿ ವಾರ್ತೆ
Published 24 ಮೇ 2024, 23:30 IST
Last Updated 24 ಮೇ 2024, 23:30 IST
ದಿ ರಾಮೇಶ್ವರಂ ಕೆಫೆ
ದಿ ರಾಮೇಶ್ವರಂ ಕೆಫೆ   

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪದಡಿ ಶೋಯಿಬ್‌ ಅಹ್ಮದ್ ಮಿರ್ಜಾ ಅಲಿಯಾಸ್ ಚೋಟುನನ್ನು (35) ಎನ್‌ಐಎ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

‘ಹುಬ್ಬಳ್ಳಿಯ ಚೋಟುನನ್ನು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದಡಿ ಈ ಹಿಂದೆ ಬಂಧಿಸಲಾಗಿತ್ತು. ಕೆಲ ತಿಂಗಳು ಜೈಲಿನಲ್ಲಿದ್ದ ಈತ, 2018ರಲ್ಲಿ ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಗೆ ಬಂದಿದ್ದ’ ಎಂದು ಎನ್‌ಐಎ ಮೂಲಗಳು ಹೇಳಿವೆ.

‘ಹುಬ್ಬಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ಚೋಟು, ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ. ಲಷ್ಕರ್‌–ಎ–ತಯಬಾ (ಎಲ್‌ಇಟಿ) ಉಗ್ರ ಸಂಘಟನೆಯಲ್ಲೂ ಸಕ್ರಿಯನಾಗಿದ್ದ. ಹಲವು ಶಂಕಿತರ ಉಗ್ರದ ಜೊತೆಯಲ್ಲೂ ಒಡನಾಟವಿಟ್ಟುಕೊಂಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಪ್ರಕರಣದಲ್ಲಿ ಬಂಧಿಸಲಾಗಿದ್ದ ಶಂಕಿತರಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮ್ಮದ್ ತಾಹಾ ವಿಚಾರಣೆಯಿಂದ ಹಲವು ಮಾಹಿತಿ ಲಭ್ಯವಾಗಿತ್ತು. ಇದನ್ನು ಆಧರಿಸಿ, ಚೋಟು ಸೇರಿದಂತೆ 11 ಮಂದಿಯ ಸ್ಥಳಗಳ ಮೇಲೆ ಇತ್ತೀಚೆಗೆ ದಾಳಿ ಮಾಡಲಾಗಿತ್ತು. ಚೋಟುನನ್ನೂ ವಶಕ್ಕೆ ಪಡೆಯಲಾಗಿತ್ತು’ ಎಂದು ಹೇಳಿವೆ.

‘ಸ್ಫೋಟದ ಪ್ರಮುಖ ಆರೋಪಿ ಎನ್ನಲಾದ ವಿದೇಶಿ ಹ್ಯಾಂಡ್ಲರ್ ಜೊತೆ ಚೋಟು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕವಿಟ್ಟುಕೊಂಡಿದ್ದ. ಅಬ್ದುಲ್ ಮಥೀನ್ ಅಹಮ್ಮದ್ ತಾಹಾನನ್ನು ವಿದೇಶಿ ಹ್ಯಾಂಡ್ಲರ್‌ಗೆ ಪರಿಚಯ ಮಾಡಿಸಿದ್ದ’ ಎಂದು ಮೂಲಗಳು ತಿಳಿಸಿವೆ.

5ನೇ ಆರೋಪಿ:

‘ಚೋಟು ಸೇರಿದಂತೆ 11 ಶಂಕಿತರು, ಬಾಂಬ್ ಸ್ಫೋಟದ ಸಂಚು ಹಾಗೂ ಇತರೆ ಕೆಲಸಕ್ಕೆ ಹಣಕಾಸು ನೆರವು ನೀಡಿದ್ದಾರೆ. ಇವರಲ್ಲಿ ಕೆಲವರು, ವಿದೇಶಿ ಹ್ಯಾಂಡ್ಲರ್ ಜೊತೆ ಒಡನಾಟವಿಟ್ಟುಕೊಂಡಿದ್ದರು. ಚೋಟು ಕೃತ್ಯಕ್ಕೆ ಸಹಕಾರ ನೀಡಿದ್ದ ಪುರಾವೆಗಳು ಲಭ್ಯವಾಗಿವೆ. ಹೀಗಾಗಿ, ಈತನನ್ನು ಬಂಧಿಸಲಾಗಿದೆ. ಈತ ಪ್ರಕರಣದ 5ನೇ ಆರೋಪಿ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ಎನ್‌ಐಎ ಮೂಲಗಳು ಹೇಳಿವೆ.

ಚೋಟು ಬಂಧನದ ಬೆನ್ನಲ್ಲೇ, ಪ್ರಕರಣದ ಶಂಕಿತರಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮ್ಮದ್ ತಾಹಾನನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.

‘ಮಾರ್ಚ್ 1ರಂದು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮುಸಾವೀರ್ ಹಾಗೂ ತಾಹಾನನ್ನು ಏಪ್ರಿಲ್ 12ರಂದು ಕೊಲ್ಕತ್ತಾ ಬಳಿ ಬಂಧಿಸಲಾಗಿತ್ತು. ತನಿಖೆಯಲ್ಲಿ ಹೊಸ ಸಂಗತಿಗಳು ಪತ್ತೆಯಾಗಿವೆ. ಇದೇ ಕಾರಣಕ್ಕೆ, ನ್ಯಾಯಾಂಗ ಬಂಧನದಲ್ಲಿದ್ದ ಮುಸಾವೀರ್ ಹಾಗೂ ಅಬ್ದುಲ್ ತಾಹಾನನ್ನು ಮೇ 27ರವರೆಗೆ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.