ಬೆಂಗಳೂರು/ತೀರ್ಥಹಳ್ಳಿ: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಬೆಂಗಳೂರು ಹಾಗೂ ತೀರ್ಥಹಳ್ಳಿಯ ಹಲವೆಡೆ ಬುಧವಾರ ದಾಳಿ ಮಾಡಿ ಶೋಧ ನಡೆಸಿದರು.
ಇಸ್ಲಾಮಿಕ್ ಸ್ಟೇಟ್ (ಐಎಸ್) ಜೊತೆ ನಂಟು ಹೊಂದಿದ್ದ ಕೆಲ ವ್ಯಕ್ತಿಗಳು, ಬೆಂಗಳೂರಿನ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿರುವ ಗುರಪ್ಪನಪಾಳ್ಯದಲ್ಲಿ ಸಭೆ ನಡೆಸಿದ್ದರು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದ್ದ ಎನ್ನಲಾದ ಶಂಕಿತ ಮುಸಾವೀರ್ ಹುಸೇನ್ ಶಾಜೀಬ್ ಸಹ ಸಭೆಯಲ್ಲಿ ಪಾಲ್ಗೊಂಡಿದ್ದನೆಂಬ ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗಿದೆ.
ತಲೆಮರೆಸಿಕೊಂಡಿರುವ ಮುಸಾವೀರ್ ಬಗ್ಗೆ ಮಾಹಿತಿ ಸಂಗ್ರಹಿಸಲು ಹಲವು ವ್ಯಕ್ತಿಗಳನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದರಿಂದ ಲಭ್ಯವಾದ ಮಾಹಿತಿ ಆಧರಿಸಿ ಗುರುಪ್ಪನಪಾಳ್ಯ ಸೇರಿದಂತೆ ಕೆಲ ಸ್ಥಳಗಳಲ್ಲಿ ಅಧಿಕಾರಿಗಳು ಬುಧವಾರ ನಸುಕಿನಲ್ಲಿ ಶೋಧ ನಡೆಸಿದರು ಎಂದು ಮೂಲಗಳು ಹೇಳಿವೆ.
ತೀರ್ಥಹಳ್ಳಿಯ ಮನೆಗಳಲ್ಲಿ ಶೋಧ: ಮುಸಾವೀರ್ ಹುಸೇನ್ ಶಾಜೀಬ್‌ನ ಸೊಪ್ಪುಗುಡ್ಡೆಯ ಮಾರ್ಕೆಟ್ ರಸ್ತೆಯಲ್ಲಿರುವ ಮನೆಯಲ್ಲಿ ಎನ್‌ಐಎ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಶೋಧ ನಡೆಸಿದರು.
ಕುಕ್ಕರ್ ಸ್ಫೋಟ ಹಾಗೂ ಐಇಡಿ ತಯಾರಿಸಿ ಪರೀಕ್ಷಾರ್ಥ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿರುವ ಅರಾಫತ್ ಅಲಿ, ಮಾಝ್ ಮುನೀರ್ ಅಹ್ಮದ್, ಮೊಹಮ್ಮದ್ ಶಾರೀಕ್‌ನ ಮನೆಯಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದಾನೆ ಎನ್ನಲಾದ ಶಂಕಿತ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಮನೆಯಲ್ಲೂ ಶೋಧ ನಡೆಸಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ನವೀದ್‌ನ ಮೊಬೈಲ್ ಮಳಿಗೆಯಲ್ಲೂ ಶೋಧ ನಡೆಸಿ ಕೆಲ ವಸ್ತುಗಳನ್ನು ಜಪ್ತಿ ಮಾಡಿದರು.
ಸೊಪ್ಪುಗುಡ್ಡೆ, ಬೆಟ್ಟಮಕ್ಕಿ, ಇಂದಿರಾನಗರ, ಆಜಾದ್ ರಸ್ತೆ, ಮಾರ್ಕೆಟ್ ರಸ್ತೆಯ ಹಲವೆಡೆ ನಡೆದ ಶೋಧದಲ್ಲಿ 15ಕ್ಕೂ ಹೆಚ್ಚು ಅಧಿಕಾರಿಗಳು ಪಾಲ್ಗೊಂಡಿದ್ದರು. ಸ್ಥಳೀಯ ಪೊಲೀಸರು ಭದ್ರತೆ ಒದಗಿಸಿದ್ದರು.
ಹಲವರಿಗೆ ನೋಟಿಸ್: ‘ಶಂಕಿತರ ಜೊತೆ ಒಡನಾಟ ಹೊಂದಿದ್ದ ಕೆಲವರನ್ನು ವಿಚಾರಣೆ ನಡೆಸಿದ ಅಧಿಕಾರಿಗಳು, ಅವರೆಲ್ಲರಿಗೂ ನೋಟಿಸ್ ನೀಡಿದ್ದಾರೆ. ವಿಚಾರಣೆಗಾಗಿ ಬೆಂಗಳೂರಿಗೆ ಬರುವಂತೆ ತಿಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ಮುಸ್ಲಿಂ ಸಮುದಾಯ ವ್ಯವಹಾರ ನಂಬಿ ಬದುಕುತ್ತಿದೆ. ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವ ಯುವಕರಿಂದ ಇಡೀ ಮುಸ್ಲಿಂ ಸಮುದಾಯದ ಮರ್ಯಾದೆ ಹರಾಜಾಗುತ್ತಿದೆ. ಯುವಕರ ಕುಟುಂಬಸ್ಥರಿಗೆ ಧೈರ್ಯ ಹೇಳುವ ವ್ಯಕ್ತಿಗಳಿಗೂ ವಿಚಾರಣೆಗಾಗಿ ನೋಟಿಸ್ ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಸುಮಾರು 65 ಜನರಿಗೆ ಈಗಾಗಲೇ ನೋಟಿಸ್ ಜಾರಿಯಾಗಿದೆ. ತೀರ್ಥಹಳ್ಳಿ ಬಿಟ್ಟು ಹೊರಗಡೆ ಹೋಗದ ಸ್ಥಿತಿ ಎದುರಾಗಿದೆ. ಯಾವಾಗ ಎಲ್ಲಿ ಯಾವ ಅನಾಹುತ ನಡೆಯುತ್ತದೆಯೋ ಎಂಬ ಭಯ ಶುರುವಾಗಿದೆ’ ಎಂದು ತೀರ್ಥಹಳ್ಳಿಯ ಕೆಲ ಮುಸ್ಲಿಂ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.