ADVERTISEMENT

ಬರಹದ ಮೊನಚು ಮೊಟಕಾಗಲು ರಾಜಕಾರಣ ಕಾರಣ: ರಹಮತ್‌ ತರೀಕೆರೆ

ಕುವೆಂಪು ಈಗ ನಿಷ್ಠುರ ಭಾಷಣ ಮಾಡಿದ್ದರೆ ಪೆಟ್ಟು ಬೀಳುತ್ತಿತ್ತು: ರಹಮತ್ ತರೀಕೆರೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 18:24 IST
Last Updated 14 ಅಕ್ಟೋಬರ್ 2023, 18:24 IST
‘ಬಾಳ ಚಿತ್ರಗಳ ಕುಲುಮೆ ಮತ್ತು ಇತರ ಪುಸ್ತಕಗಳ ಬಗ್ಗೆ ಸಂವಾದ’ ಕಾರ್ಯಕ್ರಮದಲ್ಲಿ ಸಾಹಿತಿ ರಹಮತ್‌ ತರೀಕೆರೆ ಮಾತನಾಡಿದರು. ಪ್ರಜಾವಾಣಿ ಚಿತ್ರ 
‘ಬಾಳ ಚಿತ್ರಗಳ ಕುಲುಮೆ ಮತ್ತು ಇತರ ಪುಸ್ತಕಗಳ ಬಗ್ಗೆ ಸಂವಾದ’ ಕಾರ್ಯಕ್ರಮದಲ್ಲಿ ಸಾಹಿತಿ ರಹಮತ್‌ ತರೀಕೆರೆ ಮಾತನಾಡಿದರು. ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ನಮ್ಮ ಕಾಲದ ರಾಜಕಾರಣದ ಒತ್ತಡವು ಬರವಣಿಗೆಯ ಮೊನಚನ್ನು ಕಡಿಮೆ ಮಾಡಿದೆ’ ಎಂದು ಸಾಹಿತಿ ರಹಮತ್‌ ತರೀಕೆರೆ ವಿಷಾದ ವ್ಯಕ್ತಪಡಿಸಿದರು.

‘ಆಕೃತಿ ಪುಸ್ತಕ’ ಆಯೋಜಿಸಿದ್ದ ‘ಬಾಳ ಚಿತ್ರಗಳ ಕುಲುಮೆ ಮತ್ತು ಇತರ ಪುಸ್ತಕಗಳ ಬಗ್ಗೆ’ ಶನಿವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

‘ವಿಚಾರ ಕ್ರಾಂತಿಗೆ ಆಹ್ವಾನದಂತಹ ನಿಷ್ಠುರ ಭಾಷಣವನ್ನು ಕುವೆಂಪು ಅವರು ಟಿವಿಗಳಿಲ್ಲದ ಕಾಲದಲ್ಲಿ ಮಾಡಿದ್ದರು. ಈ ಕಾಲದಲ್ಲಿ ಅಂತಹ ಭಾಷಣ ಮಾಡಿದ್ದರೆ ಅವರಿಗೂ ಪೆಟ್ಟು ಬೀಳುತ್ತಿದ್ದವು. 1992ರ ಬಳಿಕ ನೇರ ಮಾತು ಮತ್ತು ಮೊಣಚಿನ ಬರಹಗಳು ಕಡಿಮೆ. ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್‌ ಹತ್ಯೆಯ ಬಳಿಕ ಬಹುತೇಕರು ಸುರಕ್ಷತೆಯ ಪೊರೆಯೊಳಗೆ ಸೇರಿಕೊಂಡರು. ನನ್ನ ಬರಹದ ಮೇಲೂ ಈ ಪ್ರಭಾವ ಆಗಿರುತ್ತದೆ’ ಎಂದು ವಿಶ್ಲೇಷಿಸಿದರು.

ADVERTISEMENT

‘ಮುಸ್ಲಿಂ ಲೇಖಕರ ಸಂಘ ಹುಟ್ಟಿ
ಕೊಂಡಾಗ ನಾನು ಟೀಕಿಸಿದ್ದೆ. ಕುವೆಂಪು ಅವರ ಬರಹಗಳನ್ನು ಕಟು ವಿಮರ್ಶೆಗೆ ಒಳಪಡಿಸಿದ್ದೆ. ಆದರೆ, ಈ ಕಾಲದ ವಿಷ ಪಸರಿಸುವ ರಾಜಕಾರಣಕ್ಕೆ ಕುವೆಂಪು ಅವರೇ ಔಷಧವಾಗಬೇಕಿದೆ. ತನ್ನ ಧರ್ಮವನ್ನು ವಿಮರ್ಶಿಸಲು ಹೊರಟರೆ ಅದು ಇನ್ನೊಬ್ಬರಿಗೆ ಆಯುಧ
ವಾಗುತ್ತದೆ ಎಂದಣಿಸಿದಾಗ ಬರಹಗಾರ ಹಿಂಜರಿಯುತ್ತಾನೆ’ ಎಂದು ಹೇಳಿದರು.

‘ನಮ್ಮ ಬದುಕು, ಆಹಾರ, ಉಡುಗೆಯನ್ನು ಇನ್ಯಾರೋ ನಿಯಂತ್ರಿ
ಸುತ್ತಿದ್ದಾರೆ. ಬರವಣಿಗೆ, ಮಾತುಗಳಿಗೆ ಕಡಿವಾಣಗಳು ಬಿದ್ದಿವೆ. ಒಡೆದು ಹೋದ ಸಮಾಜದಲ್ಲಿ ಆತ್ಯಂತಿಕ ಸೌಹಾರ್ದದ ವಾತಾವರಣ ಉಂಟಾಗುವುದು ಸುಲಭವಲ್ಲ. ಮುಕ್ತವಾಗಿ ಬರೆಯುವ, ಟೀಕಿಸುವ, ವಿಮರ್ಶಿಸುವ, ಮಾತನಾಡುವ ಸ್ವಾತಂತ್ರ್ಯದ ದಿನಗಳು ಮತ್ತೆ ಬರಬೇಕು ಎಂದು ಆಶಿಸಿದರು.

‘ಆತ್ಮಕತೆ ಇತಿಹಾಸದ ದಾಖಲೆಯಾಗಬಾರದು ಎಂಬ ಉದ್ದೇಶವನ್ನು ಇಟ್ಟುಕೊಂಡೇ ಬೇರೆ ರೀತಿಯ ಪ್ರಯೋಗ ಮಾಡಿದ್ದೇನೆ. ಕ್ರಮಬದ್ಧವಾಗಿರದೇ ಲಲಿತ ಪ್ರಬಂಧದ ಶೈಲಿಯಲ್ಲಿ ಪ್ರೀತಿ ಪಾತ್ರರಿಗೆ ಕೀಟಲೆ ಮಾಡುವ ದಾಟಿಯಲ್ಲಿ ಬರೆದಿದ್ದೇನೆ. ಈ ಪ್ರಯೋಗ ಯಶಸ್ವಿಯಾಗುತ್ತದೆಯೇ ಇಲ್ಲವೇ ಎಂಬುದು ಗೊತ್ತಿಲ್ಲ’ ಎಂದು ತಿಳಿಸಿದರು.

‘ತಂದೆ ಕುಲುಮೆ ಮಾಡಿಕೊಂ
ಡಿದ್ದರು. ಅದರಿಂದ ಕುಟುಂಬ ಬದು
ಕುತ್ತಿತ್ತು. ಪ್ರಜ್ಞಾಪೂರ್ವಕವಾಗಿ ಜಾತ್ಯತೀತವಾಗಿತ್ತು ಎಂದು ಹೇಳಲಾರೆ. ಆದರೆ, ಎಲ್ಲ ಧರ್ಮ, ಎಲ್ಲ ಭಾಷೆ
ಜನರೊಂದಿಗೆ ಸಹಜವಾಗಿ ವ್ಯವಹರಿ
ಸುವ ವಾತಾವರಣ ಇತ್ತು. ಅದೇ ನಮ್ಮನ್ನು ಬೆಳೆಸಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.