ಬೆಂಗಳೂರಿನ ಬೀದಿಗಳನ್ನು ಮೊದಲ ಬಾರಿಗೆ ಬೆಳಗಿದ ವಿದ್ಯುತ್ ದೀಪಗಳಿಗೆ ಈಗ 115ರ ಪ್ರಾಯ.
ಹೌದು, ಏಷ್ಯಾದಲ್ಲಿಯೇ ಮೊದಲ ಬಾರಿಗೆ ಬೀದಿಬದಿಯಲ್ಲಿ ವಿದ್ಯುತ್ ದೀಪಗಳು ಬೆಳಕು ಚೆಲ್ಲಿದ್ದು ನಮ್ಮ ಹೆಮ್ಮೆಯ ಬೆಂಗಳೂರಿನಲ್ಲಿ. 1905ರ ಆಗಸ್ಟ್ 5ರಂದು ಮೊದಲ ಬಾರಿಗೆ ಸಿಲಿಕಾನ್ ಸಿಟಿಯ ರಸ್ತೆ, ಬೀದಿಗಳು ವಿದ್ಯುತ್ ದೀಪಗಳಿಂದ ಕಂಗೊಳಿಸಿದ್ದವು. ಆಗಿನ್ನೂ ದೆಹಲಿ, ಕೋಲ್ಕತ್ತ, ಮುಂಬೈನಂತಹ ಮಹಾನಗರಗಳಲ್ಲಿ ಬೀದಿ ದೀಪಗಳಿರಲಿಲ್ಲ.
ಬೆಂದಕಾಳೂರಿಗೆ ನಾಡಪ್ರಭು ಕೆಂಪೇಗೌಡರು ಅಡಿಗಲ್ಲು ಹಾಕಿದ ನಂತರ ಹಲವಾರು ಮೊದಲುಗಳಿಗೆ ಬೆಂಗಳೂರು ಸಾಕ್ಷಿಯಾಗಿದೆ. ಅಂತಹ ಅವಿಸ್ಮರಣೀಯ ದಾಖಲೆಗಳಲ್ಲಿ ವಿದ್ಯುತ್ ದೀಪಗಳು ಪ್ರಮುಖ ಸ್ಥಾನ ಪಡೆಯುತ್ತವೆ.
ಮೈಸೂರು ಸಂಸ್ಥಾನದ ಜನಪರ ದೊರೆ ಎಂದೇ ಖ್ಯಾತರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು ರಾಜ್ಯದ (ಇಂದಿನ ಕರ್ನಾಟಕ) ಆಳ್ವಿಕೆ ಪ್ರಾರಂಭಿಸಿದ ನಂತರ ಅಭಿವೃದ್ಧಿ ಕೆಲಸಗಳ ಹೊಸ ಯುಗವೊಂದು ಆರಂಭವಾಗುತ್ತದೆ.
1905ರ ಆಗಸ್ಟ್ 5ರಂದು ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆ (ಕೆ.ಆರ್. ಮಾರುಕಟ್ಟೆ) ಬಳಿಯ ರಸ್ತೆಯಲ್ಲಿ ಬೀದಿ ದೀಪ ಬೆಳಗಿದವು.ಬ್ರಿಟಿಷ್ ವೈಸ್‍ರಾಯ್ ಕೌನ್ಸಿಲ್ ಸದಸ್ಯರಾಗಿದ್ದ ಸರ್ ಜಾನ್ ಹವೆಟ್ ಅವರು ಸ್ವಿಚ್ ಒತ್ತುವ ಮೂಲಕ ವಿದ್ಯುತ್ ದೀಪಗಳನ್ನು ಬೆಳಗಿಸಿದರು. ಇದು ಇತಿಹಾಸದಲ್ಲೇ ಅತ್ಯಂತ ಮಹತ್ವದ ದಿನವಾಯಿತು.
ಕೆ.ಆರ್. ಮಾರುಕಟ್ಟೆಯಲ್ಲಿ ಈ ವಿದ್ಯುತ್ ಬೀದಿದೀಪಗಳನ್ನು ನೋಡಲು ಬೇರೆ ಬೇರೆ ಊರುಗಳಿಂದ ಜನರು ಎತ್ತಿನ ಗಾಡಿಗಳನ್ನು ಮಾಡಿಕೊಂಡು ಬರುತ್ತಿದ್ದರಂತೆ.ಅಂದಿನ ಕಾಲದ ಮುನ್ಸಿಪಾಲಿಟಿಯು ₹ 6 ಲಕ್ಷ ಖರ್ಚು ಮಾಡಿ ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ ವಿದ್ಯುತ್ ಕಾಮಗಾರಿ ಕೈಗೊಂಡಿತ್ತು. ಬಲಿಗ ಮರದ ಕಂಬಗಳನ್ನು ನೆಟ್ಟು ಅವುಗಳ ಮೂಲಕ ತಾಮ್ರದ ತಂತಿಗಳನ್ನು ಎಳೆಯಿಸಲಾಗಿತ್ತು ಎಂದುಬೆಂಗಳೂರು ಇತಿಹಾಸದ ಪುಸ್ತಕದಲ್ಲಿ ದಾಖಲಾಗಿದೆ.
ಇದಕ್ಕೂ ಮೊದಲು ಬೀದಿಗಳಲ್ಲಿ, ಮನೆ, ಮಾರುಕಟ್ಟೆಗಳಲ್ಲಿ ಸೀಮೆಎಣ್ಣೆ ದೀಪಗಳನ್ನು ಬೆಳಗಿಸಲಾಗುತ್ತಿತ್ತು. ರಸ್ತೆಬದಿಯ ಕಂಬಗಳಲ್ಲಿ ಸೀಮೆಎಣ್ಣೆ ಲಾಂಧ್ರದ ದೀಪಗಳನ್ನಿಟ್ಟು ಪ್ರತಿದಿನವೂ ಅದಕ್ಕೆ ಸೀಮೆಎಣ್ಣೆ ಹಾಕಿ ದೀಪಗಳನ್ನು ಹೊತ್ತಿಸಲಾಗುತ್ತಿತ್ತು. ಇವುಗಳ ನಿರ್ವಹಣೆಗೆ ಪ್ರತಿ ಪ್ರದೇಶಕ್ಕೆ ಮೂವರು ಕಾವಲುಗಾರರನ್ನು ನೇಮಿಸಲಾಗಿತ್ತು.
ಶಿವನಸಮುದ್ರದಿಂದ ಕೋಲಾರದ ಚಿನ್ನದ ಗಣಿಗೆ 1903-04ರಲ್ಲಿ ಪ್ರಥಮ ಹಂತದ ವಿದ್ಯುತ್ ಸರಬರಾಜು ಮುಗಿದ ನಂತರ ದ್ವಿತೀಯ ಹಂತದ ಸರಬರಾಜು ಒದಗಿಸಿದ ಮೇಲೆ ಬೆಂಗಳೂರು ನಗರಕ್ಕೂ ಸಹ ವಿದ್ಯುತ್ ಬಂತು. 1905ರ ಕೊನೆಯ ಹೊತ್ತಿಗೆ ಬೆಂಗಳೂರಿನಲ್ಲಿ ಒಟ್ಟು 1395 ವಿದ್ಯುತ್ ಬೀದಿದೀಪಗಳನ್ನು ಅಳವಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.