ಬೆಂಗಳೂರು: ಜೀವನ್‌ಭಿಮಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ತಿಪ್ಪಸಂದ್ರ ಮುಖ್ಯ ರಸ್ತೆಯ ಲಕ್ಷ್ಮಿ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ್ದು ಬಾಲಕ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ದೇವರ ವಿಗ್ರಹವನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದಾಗ ವಿಗ್ರಹ ವಿರೂಪಗೊಳಿಸಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಎಂಬುದು ಗೊತ್ತಾಯಿತು ಎಂದು ಪೊಲೀಸರು ಹೇಳಿದರು.
‘ಠಾಣಾ ವ್ಯಾಪ್ತಿಯ ಬಡಾವಣೆಯೊಂದರಲ್ಲಿ ನೆಲಸಿದ್ದ ವಿದ್ಯಾರ್ಥಿಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೂರು ಬಾರಿ ಅನುತ್ತೀರ್ಣಗೊಂಡಿದ್ದ. ಇದರಿಂದ ಆಕ್ರೋಶಗೊಂಡು ವಿಗ್ರಹ ವಿರೂಪಗೊಳಿಸಿದ್ದಾನೆ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.
‘ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲನೆ ವೇಳೆ ಬಾಲಕ ಕೃತ್ಯ ಎಸಗಿರುವುದು ಗೊತ್ತಾಗಿದೆ. ಅಲ್ಲದೇ ಮಧ್ಯರಾತ್ರಿ ಒಬ್ಬನೇ ಮನೆಯಿಂದ ಹೊರಬಂದು ಓಡಾಟ ನಡೆಸಿರುವ ದೃಶ್ಯ ಕೆಲವು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಬಾಲಕನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ ಬಾಲ ಮಂದಿರಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.