ಬೆಂಗಳೂರು: ಅಧ್ಯಕ್ಷರ ಅವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೆ ಹೆಚ್ಚಿಸುವುದೂ ಸೇರಿದಂತೆ ಹಲವು ಮಹತ್ವದ ಬೈಲಾ ತಿದ್ದುಪಡಿಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸರ್ವಸದಸ್ಯರ ಸಭೆ ಸರ್ವಾನುಮತದ ಒಪ್ಪಿಗೆ ನೀಡಿತು.
ಬಸವನಗುಡಿಯ ಆಚಾರ್ಯ ಪಾಠ ಶಾಲಾ ಕಾಲೇಜು ಆವರಣದಲ್ಲಿ ಭಾನುವಾರ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು.
ಸಭೆ ಆರಂಭದಲ್ಲಿ ಕೆಲವರು ಗದ್ದಲ ಎಬ್ಬಿಸಿದರು. ಅಧ್ಯಕ್ಷರು ಬೈಲಾದಲ್ಲಿನ ಅಂಶಗಳ ಬಗ್ಗೆ ಸ್ಪಷ್ಟನೆ ನೀಡಿ
ದರು. ಸಮಾಧಾನದಿಂದ ಸಭೆ ನಡೆಯಲು ಸಹಕರಿಸುವಂತೆ ಕೋರಿದರು.
ಅಶೋಕ್ ಹಾರನಹಳ್ಳಿ ಮಾತನಾಡಿ, ‘ಮಹಾಸಭಾದ ಬೈಲಾ ದಶಕಗಳ ಹಿಂದೆ ರಚನೆಗೊಂಡಿದ್ದು, ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ತಿದ್ದುಪಡಿ ಅವಶ್ಯಕತೆ ಇದೆ. ತಜ್ಞರು, ಅನುಭವಿ ವಕೀಲರು, ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಒಳಗೊಂಡ ಸಮಿತಿ ಸಮಗ್ರ ಅಧ್ಯಯನ ನಡೆಸಿ ಸೂಚಿಸಿದ ಶಿಫಾರಸು ಅಳವಡಿಸಿಕೊಂಡು ಬೈಲಾಕ್ಕೆ ತಿದ್ದುಪಡಿ ತರಲಾಗಿದೆ. ಕಾರ್ಯಕಾರಿ ಸಮಿತಿ ಮುಂದಿಟ್ಟು ಒಪ್ಪಿಗೆ ಪಡೆಯಲಾಗಿದೆ’ ಎಂದರು.
ಸದಸ್ಯತ್ವ ಶುಲ್ಕವನ್ನು ಹೆಚ್ಚಿಸಲೂ ಸಭೆ ತೀರ್ಮಾನ ಕೈಗೊಂಡಿತು. ನಿಗದಿತ ಕೇಂದ್ರಗಳಿಂದ ಮಹಾಸಭಾ ಆಧ್ಯಕ್ಷರ ಚುನಾವಣೆಗೆ ಮತ ಚಲಾಯಿಸುವ ಸಂಬಂಧದ ತಿದ್ದುಪಡಿಗೂ ಸಭೆ ಅನುಮೋದನೆ ನೀಡಿತು.
‘ಅಶೋಕ್ ಹಾರನಹಳ್ಳಿ ಅಧ್ಯಕ್ಷರಾದ ನಂತರ ಮಹಾಸಭೆಯ ಚಟುವಟಿಕೆಗಳನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುತ್ತಿದೆ’ ಎಂದು ಸದಸ್ಯರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.