ಬೆಂಗಳೂರು: ‘ನಾವು ನಾಟಕ, ಸಿನಿಮಾಗಳಲ್ಲಷ್ಟೇ ಹೀರೊಗಳು, ನಿಜವಾದ ಹೀರೊಗಳು ನೀವು’ ಎಂದು ಡಾ.ರಾಜ್‌ಕುಮಾರ್ ಮನದಾಳದಿಂದ ಹೇಳಿದ ಮಾತಿನ ಮುಂದೆ ಭಾರತ ರತ್ನ ಕೂಡ ಸಣ್ಣದು ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಮಹಾದೇವ್ ಬಿದರಿ ಹೇಳಿದರು.
ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (ಅಪ್ಪು) ಸೇವಾ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ಸುವರ್ಣ ಸಂಭ್ರಮ, ಡಾ. ರಾಜ್‌ಕುಮಾರ್ ರತ್ನ ಪ್ರಶಸ್ತಿ, ಡಾ. ಅಪ್ಪು ಸೇವಾ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್‌ಕುಮಾರ್ ನನಗೆ ಒಬ್ಬನಿಗೆ ಹೇಳಿದ ಮಾತಲ್ಲ ಅದು, ಸಮಸ್ತ ಪೊಲೀಸ್ ಇಲಾಖೆಗೆ ಹೇಳಿದ ಮಾತು’ ಎಂದು ಬಣ್ಣಿಸಿದರು.
ನಿವೃತ್ತ ಎಸಿಪಿ ಬಿ.ಕೆ. ಶಿವರಾಂ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕನ್ನಡವು ಧಮನಿ ಧಮನಿಗಳಲ್ಲಿ ಇರುವುದು ಪೊಲೀಸ್ ಇಲಾಖೆಯಲ್ಲಿ ಮಾತ್ರ. ಉಳಿದ ಯಾವ ಇಲಾಖೆಯಲ್ಲೂ ನಮ್ಮ ಇಲಾಖೆ ಬಳಸಿದಷ್ಟು ಕನ್ನಡವನ್ನು ಬಳಸುವುದಿಲ್ಲ’ ಎಂದು ತಿಳಿಸಿದರು.
‘40 ವರ್ಷಗಳ ಹಿಂದೆ ಟ್ಯಾನರಿ ರಸ್ತೆಯಲ್ಲಿ ಪರರಾಜ್ಯಗಳ ಬಾವುಟಗಳು ಹಾರಾಡುತ್ತಿದ್ದವು. ಆದರೆ, ಕನ್ನಡದ ಬಾವುಟ ಇರಲಿಲ್ಲ. ಹಾರಿಸಲು ಬಿಡುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳಿಗೆ ನಾನೇ ಬೆಂಗಾವಲಾಗಿ ನಿಂತು 80 ಅಡಿ ಎತ್ತರದಲ್ಲಿ ಕನ್ನಡ ಬಾವುಟ ಹಾರಿಸುವಂತೆ ಮಾಡಿದ್ದೆ’ ಎಂದು ನೆನಪು ಮಾಡಿಕೊಂಡರು.
ನಿವೃತ್ತ ಪೊಲೀಸ್ ಅಧಿಕಾರಿ ಬಿ.ಬಿ. ಅಶೋಕ್ ಕುಮಾರ್ ಮಾತನಾಡಿ, ‘ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದಿಂದ ಸ್ಫೂರ್ತಿ ಪಡೆದು ಬೆಂಗಳೂರಿನಿಂದ ಹೊರಗೆ ತೋಟ ಮಾಡಿದ್ದೆ. ಕೃಷಿ ಮಾಡಿಕೊಂಡು ಮಣ್ಣಿನ ಮಗನಾಗಿದ್ದೇನೆ’ ಎಂದು ಹೇಳಿದರು.
ನಿವೃತ್ತ ಪೊಲೀಸ್ ಅಧಿಕಾರಿ ಬಿ.ಬಿ. ಅಶೋಕ್ ಕುಮಾರ್, ನವಯುಗ ಹೋಟೆಲ್ ಮಾಲೀಕ ಕೆ. ಮೋಹನ್‌ರಾವ್, ನಟಿ ಗಿರಿಜಾ ಲೋಕೇಶ್, ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ರಾಜ್ಯಾಧ್ಯಕ್ಷ ಎನ್. ಜಯರಾಂ ಅವರಿಗೆ ಡಾ. ರಾಜ್‌ಕುಮಾರ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎ. ಅಮೃತರಾಜ್, ದಂಡು ಪ್ರದೇಶದ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ. ಜಗನ್ನಾಥ ರೆಡ್ಡಿ, ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಬಿ. ಮಹಾದೇವಸ್ವಾಮಿ, ಭಾರತೀಯ ಸೇವಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ರಾಮಚಂದ್ರ, ನಮ್ಮ ಕರ್ನಾಟಕ ಸೇವೆ ರಾಜ್ಯಾಧ್ಯಕ್ಷ ಎಂ. ಬಸವರಾಜ ಪಡುಕೋಟೆ, ಎಸ್.ಎ. ಮಾರುತಿ ಅವರಿಗೆ ಡಾ. ಅಪ್ಪು ಸೇವಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ನಟಿ ಅಂಕಿತಾ ಜಯರಾಮ್, ಬಾಲಪ್ರತಿಭೆ ಜ್ಞಾನ ಗುರುರಾಜ್ ಅವರಿಗೆ ಡಾ. ಅಪ್ಪು ವಿಶೇಷ ಬಾಲಪ್ರತಿಭೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಸಹಾಯಕ ಪೊಲೀಸ್ ಆಯುಕ್ತ ಪ್ರಕಾಶ್ ರೆಡ್ಡಿ, ಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ಮಂಜುಶ್ರೀ ಸಾಂಸ್ಕೃತಿಕ ಸೇವಾ ಟ್ರಸ್ಟ್ ಅಧ್ಯಕ್ಷೆ ಮಂಜುಶ್ರೀ, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ಪುನೀತ್ ರಾಜ್‌ಕುಮಾರ್ ಸೇವಾ ಸಮಿತಿ ಅಧ್ಯಕ್ಷ ವಿ. ಗಣೇಶ್ ರಾವ್, ಕಾರ್ಯಾಧ್ಯಕ್ಷ ಜಾನ್ ಬ್ರಿಟೊ, ಕಾನೂನು ಸಲಹೆಗಾರ ಕೆ. ಶ್ರೀಧರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.