ADVERTISEMENT

ಬೆಂಗಳೂರು | ಕಳ್ಳತನ ಪ್ರಕರಣ: 10 ಆರೋಪಿಗಳ ಬಂಧನ; 37 ದ್ವಿಚಕ್ರ ವಾಹನ ವಶ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 15:14 IST
Last Updated 23 ಜುಲೈ 2024, 15:14 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಹತ್ತು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ₹37.74 ಲಕ್ಷ ಮೌಲ್ಯದ 37 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 2ರಂದು ವ್ಯಕ್ತಿಯೊಬ್ಬರ ವಾಹನ ಕಳವಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಶೆಟ್ಟಿಹಳ್ಳಿ ರೈಲ್ವೆ ಗೇಟ್‌ ಬಳಿ ದ್ವಿಚಕ್ರ ವಾಹನ ಸಮೇತ ಉತ್ತರಹಳ್ಳಿಯ ದರ್ಶನ್, ಮಂಡ್ಯದ ತೇಜಸ್‌ ಮತ್ತು ಎಲೆಕ್ಟ್ರಾನಿಕ್ ಸಿಟಿಯ ಭುವನ್‌ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದರು. 15 ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡರು ಎಂದು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ADVERTISEMENT

ದರ್ಶನ್ ವಿರುದ್ಧ ಸೋಲದೇವನಹಳ್ಳಿಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ ಮಾರಾಟ ಮಾಡಿದ್ದ ₹20 ಲಕ್ಷ ಮೌಲ್ಯದ ವಿವಿಧ ಕಂಪನಿಯ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ವಾಹನದ ವಾರಸುದಾರರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಹ್ಯಾಂಡಲ್ ಲಾಕ್ ಮುರಿದು ಕಳವು: ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಿ ₹10.71 ಲಕ್ಷ ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಬಂಧಿತ ಮಂಡ್ಯದ ಸತೀಶ್ ಮತ್ತು ಆಂಧ್ರಪ್ರದೇಶದ ಅಶೋಕ್‌ ಹಲವು ಮನೆ ಕಳ್ಳತನ, ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಸತೀಶ್ ವಿರುದ್ಧ 41 ಪ್ರಕರಣ ಹಾಗೂ ಅಶೋಕ್ ವಿರುದ್ಧ 15 ಪ್ರಕರಣಗಳು ದಾಖಲಾಗಿವೆ.

ಮನೆಗಳು ಮತ್ತು ಕಾಂಪ್ಲೆಕ್ಸ್‌ಗಳ ಎದುರು, ಬಸ್‌ ಹಾಗೂ ರೈಲು ನಿಲ್ದಾಣಗಳಲ್ಲಿ ನಿಲ್ಲಿಸಿರುತ್ತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು. ಈ ಎಲ್ಲಾ ದ್ವಿಚಕ್ರ ವಾಹನಗಳನ್ನು ಬ್ಯಾಡರಹಳ್ಳಿಯ ಕೆರೆ ಪಕ್ಕದ ಜಾಗದಲ್ಲಿ ವಶಕ್ಕೆ ಪಡೆಯಲಾಗಿದೆ. ಇಬ್ಬರ ಬಂಧನದಿಂದ ಒಟ್ಟು 8 ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.

ಖಾಲಿ ಜಾಗದಲ್ಲಿ ನಿಲ್ಲಿಸಿದ ವಾಹನ ಕಳವು: ಚನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ₹5.43 ಲಕ್ಷ ಮೌಲ್ಯದ 9 ವಾಹನ ವಶಕ್ಕೆ ಪಡಿಸಿಕೊಳ್ಳಲಾಗಿದೆ. ನಗರದ ವಿವಿಧೆಡೆ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಆರೋಪಿಗಳು ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಬಂಧನ: ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ, ₹80 ಸಾವಿರ ಮೌಲ್ಯದ ನಾಲ್ಕು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಅಪಹರಣ ಹಾಗೂ ಹೆದ್ದಾರಿ ದರೋಡೆ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.