ADVERTISEMENT

‌ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಸಿ ಕಳ್ಳತನ: ಫುಡ್‌ ಡೆಲಿವರಿ ಯುವಕನ ಬಂಧನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:56 IST
Last Updated 22 ಅಕ್ಟೋಬರ್ 2024, 15:56 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಫುಡ್ ಡೆಲಿವರಿ ಕೆಲಸದ ಯುವಕನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಅತ್ತಿಬೆಲೆ ನಿವಾಸಿ ಫೈಯೂಮ್(26) ಬಂಧಿತ.

ಆರೋಪಿಯಿಂದ ₹2 ಲಕ್ಷ ಮೌಲ್ಯದ 160 ಗ್ರಾಂ. ಚಿನ್ನಾಭರಣ ಹಾಗೂ 1 ಕೆ.ಜಿ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ವೆಂಕಟೇಗೌಡ ಲೇಔಟ್‌ನಲ್ಲಿ ವಾಸವಿರುವ ದೂರುದಾರರು, ಕುಟುಂಬದ ಸದಸ್ಯರೊಂದಿಗೆ ಧರ್ಮಸ್ಥಳಕ್ಕೆ ತೆರಳಿದ್ದರು. ಫೆಬ್ರುವರಿ 28ರಂದು ವಾಪಸ್ ಬಂದು ನೋಡಿದಾಗ ಮನೆಯ ಮುಂಬಾಗಿಲು ಮುರಿದು ಒಳ ನುಗ್ಗಿ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಯನ್ನು ಕಳ್ಳತನ ನಡೆಸಿದ್ದು ಗೊತ್ತಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಫುಡ್‌ ಡೆಲಿವರಿ ಕೆಲಸ ಮಾಡುತ್ತಿದ್ದ. ಡೆಲಿವರಿಗೆ ಹೋಗುವ ಸಂದರ್ಭದಲ್ಲಿ ಒಂದೆರಡು ದಿನಗಳ ಕಾಲ ಸತತವಾಗಿ ಬೀಗ ಹಾಕಿರುತ್ತಿದ್ದ ಮನೆಗಳನ್ನು ಗುರುತಿಸುತ್ತಿದ್ದ. ಅದೇ ದಿನ ರಾತ್ರಿ ಮನೆಯ ಮುಂದಿನ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳಕ್ಕೆ ನುಗ್ಗುತ್ತಿದ್ದ. ಕದ್ದ ಚಿನ್ನಾಭರಣಗಳನ್ನು ಸ್ನೇಹಿತನ ಮೂಲಕ ಚಿನ್ನಾಭರಣ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದ. ಬಂದ ಹಣದಲ್ಲಿ ಮೋಜು ಮಾಡುವುದು, ಪಾರಿವಾಳ ಬೆಟ್ಟಿಂಗ್‌ನಲ್ಲಿ ಹೂಡಿಕೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಈ ಹಿಂದೆ ರಾಮಮೂರ್ತಿನಗರ, ಬಾಣಸವಾಡಿ, ಕೆ.ಆರ್.ಪುರ, ಮಹದೇವಪುರ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ಫೈಯೂಮ್‌ ಜೈಲು ಸೇರಿದ್ದ. 2023ರ ಡಿಸೆಂಬರ್‌ನಲ್ಲಿ ಜಾಮೀನು ಪಡೆದುಕೊಂಡು ಬಿಡುಗಡೆ ಆಗಿದ್ದ. ಮತ್ತೆ ಅದೇ ಕೃತ್ಯ ಮುಂದುವರಿಸಿದ್ದ. ಆರೋಪಿಯ ಬಂಧನದಿಂದ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆ ಕಳ್ಳತನ ಪ್ರಕರಣಗಳು ಪತ್ತೆ ಆಗಿವೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.