ಬೆಂಗಳೂರು: ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಹಣ ಕದ್ದು ಪರಾರಿಯಾಗಿದ್ದ ಭದ್ರತಾ ಸಿಬ್ಬಂದಿಯೊಬ್ಬರನ್ನು ನಗರದ ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರದ ನಾರಾಯಣಸ್ವಾಮಿ (33) ಎಂಬುವರನ್ನು ಬಂಧಿಸಿ, ಕಾರು, ಚಿನ್ನಾಭರಣ ಹಾಗೂ ₹ 3.50 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಜಯನಗರದ ಲೆಕ್ಕಪರಿಶೋಧಕರ ಕಚೇರಿಯೊಂದರಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಚಾಲಕನಾಗಿ ನಾರಾಯಣಸ್ವಾಮಿ ಒಂದು ವರ್ಷದಿಂದ ಕೆಲಸ ಮಾಡಿಕೊಂಡಿದ್ದ. ಕಚೇರಿಯ ಮಾಲೀಕರು, ಇತರೆ ಸಿಬ್ಬಂದಿಯ ಚಲನವಲನಗಳ ಕುರಿತು ತಿಳಿದುಕೊಂಡಿದ್ದ ಆರೋಪಿ, ಸೆ. 22ರಂದು ಕ್ಯಾಬಿನ್‌ನ ಡ್ರಾಯರ್‌ನಲ್ಲಿಟ್ಟಿದ್ದ ₹10.95 ಲಕ್ಷ ಕದ್ದು ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.
‘ಹಣ ಕಳುವಾಗಿರುವ ಕುರಿತು ಕಚೇರಿಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳ ಸಮೇತ ಮಾಲೀಕರು ಸಿದ್ದಾಪುರ ಠಾಣೆಗೆ ದೂರು ನೀಡಿದ್ದರು. ಕಸ್ತೂರಿನಗರದ ಹೊರ ವರ್ತುಲ ರಸ್ತೆಯ ಟೀ ಹೋಟೆಲ್ ಬಳಿ ಆರೋಪಿಯನ್ನು ಬಂಧಿಸಲಾಯಿತು. ಕದ್ದ ಹಣದಲ್ಲಿ ಆರೋಪಿ ಸೆಕೆಂಡ್ ಹ್ಯಾಂಡ್ ಕಾರು, ಎರಡು ಚಿನ್ನದ ಉಂಗುರ, ಚಿನ್ನದ ಬ್ರಾಸ್ ಲೆಟ್, ಚಿನ್ನದ ಸರ, ವಾಚ್, ವಿವೋ ಮೊಬೈಲ್ ಫೋನ್ ಖರೀದಿಸಿದ್ದ. ಕಾರಿನ ಡಿಕ್ಕಿಯಲ್ಲಿಟ್ಟಿದ್ದ ₹ 3.50 ಲಕ್ಷ ನಗದು ಹಾಗೂ ಖರೀದಿಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.