ಬೆಂಗಳೂರು: ಒಂದೂವರೆ ವರ್ಷದ ಹಿಂದೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣದ ಆರೋಪಿಯನ್ನು ‘ಬ್ರೈನ್ ಮ್ಯಾಪಿಂಗ್’ ಪರೀಕ್ಷೆಗೆ ಒಳಪಡಿಸಿ ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಅನ್ನಪೂರ್ಣ ಬಂಧಿತ ಆರೋಪಿ.
‘ನ್ಯಾಯಾಲಯದ ಅನುಮತಿ ಪಡೆದು ಅನ್ನಪೂರ್ಣ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲೂ ಆರೋಪಿ ಸುಳಿವು ಬಿಟ್ಟಿರಲಿಲ್ಲ. ಬಳಿಕ ನಡೆದ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿದ್ದಾಳೆ’ ಎಂದು ಪೊಲೀಸರು ಹೇಳಿದರು.
‘ಉದ್ಯಮಿ ಹೊನ್ನಾಚಾರಿ ಅವರ ಮನೆಯಲ್ಲಿ ₹ 10 ಲಕ್ಷ ನಗದು, ₹ 250 ಗ್ರಾಂ ಚಿನ್ನಾಭರಣ ಕಳವು ನಡೆದಿತ್ತು. ಅವರ ಮನೆಯಲ್ಲಿ ಕೆಲಸಕ್ಕಿದ್ದ ಅನ್ನಪೂರ್ಣ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಪೊಲೀಸರು ನಾಲ್ಕು ಬಾರಿ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದರೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ’ ಎಂದಿದ್ದಾರೆ.
ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಬ್ರೈನ್ ಮ್ಯಾಪಿಂಗ್ ಪರೀಕ್ಷೆಯ ವೇಳೆ ‘ಮಾಮ’ ಎನ್ನುವ ಪದ ಹೇಳಿದ್ದಳು. ಕದ್ದ ಚಿನ್ನಾಭರಣ ಹಾಗೂ ಹಣವನ್ನು ಗದಗದಲ್ಲಿ ನೆಲೆಸಿರುವ ಮಾವನ ಮನೆಗೆ ಕೊಟ್ಟಿದ್ದಳು. ಪರೀಕ್ಷೆ ವೇಳೆ ನೀಡಿದ ಮಾಮ ಪದ ಆಧರಿಸಿ ಅವರ ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಮಾವನಿಗೆ ಕೊಟ್ಟಿದ್ದ ಹಾಗೂ ಗಿರವಿಯಿಟ್ಟಿದ್ದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.