ADVERTISEMENT

ಸಾಕಾಣಿಕೆ ಕೇಂದ್ರಕ್ಕೆ ನುಗ್ಗಿ 80 ಹಂದಿ ಕಳ್ಳತನ: ಹತ್ತು ಆರೋಪಿಗಳ ಬಂಧನ

ಮಾಲೀಕರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 2:36 IST
Last Updated 20 ಆಗಸ್ಟ್ 2022, 2:36 IST
ಹಂದಿಗಳು ( ಸಾಂದರ್ಭಿಕ ಚಿತ್ರ)
ಹಂದಿಗಳು ( ಸಾಂದರ್ಭಿಕ ಚಿತ್ರ)   

ಬೆಂಗಳೂರು: ಹುಣಸಮಾರನಹಳ್ಳಿ ಬಳಿಯ ಸಾಕಾಣಿಕೆ ಕೇಂದ್ರವೊಂದಕ್ಕೆ ನುಗ್ಗಿ ಮಾಲೀಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, 80 ಹಂದಿಗಳನ್ನು ಕದ್ದೊಯ್ದಿದ್ದ ಹತ್ತು ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.

‘ರಾಯಚೂರು ಜಿಲ್ಲೆಯ ಸಿಂಧನೂರಿನ ಶಂಕರ್ (22), ಪರಶುರಾಮ್ (25), ಮಾನ್ವಿಯ ಬಸವರಾಜು (29), ಅಂಬಾಮಠದ ಅಂಬಣ್ಣ (21), ಗದಗ ಲಕ್ಷ್ಮೇಶ್ವರದ ಅಶೋಕ (21), ಬೆಳಗಾವಿ ಜಿಲ್ಲೆಯ ಅಡಿವೆಪ್ಪ (22), ಫಕ್ಕಿರಪ್ಪ ಚಿಪ್ಪಲಕಟ್ಟಿ (31), ಶಂಕರ್ (27), ಯಲಹಂಕದ ಮಂಜುನಾಥ್ (33) ಹಾಗೂ ಹಾಸನದ ಕಿರಣ್ (28) ಬಂಧಿತರು. ಇವರಿಂದ ₹ 20 ಲಕ್ಷ ಮೌಲ್ಯದ 80 ಹಂದಿಗಳು ಹಾಗೂ ₹ 28 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದರು.

‘ಹಂದಿಗಳ ಕಳ್ಳತನ ಸಂಬಂಧ ಸಾಕಾಣಿಕೆ ಕೇಂದ್ರದ ಎಚ್‌.ಆರ್. ಸಂದೀಪ್ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದೂ ಹೇಳಿದರು.

ADVERTISEMENT

ವ್ಯವಸ್ಥಿತ ಸಂಚು: ‘ಅಕ್ರಮವಾಗಿ ಹಣ ಸಂಪಾದಿಸಬೇಕು ಎಂದುಕೊಂಡಿದ್ದ ಆರೋಪಿಗಳು, ಹಂದಿಗಳನ್ನು ಕಳ್ಳತನ ಮಾಡಲು ವ್ಯವಸ್ಥಿತ ಸಂಚು ರೂಪಿಸಿದ್ದರು. ಹಂದಿ ಸಾಕಾಣಿಕೆ ಕೇಂದ್ರದ ಬಳಿ ಸುತ್ತಾಡಿ, ಯಾರೆಲ್ಲ ಕೇಂದ್ರದಲ್ಲಿ ಇರುತ್ತಾರೆಂದು ತಿಳಿದುಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಜುಲೈ 16ರಂದು ತಡರಾತ್ರಿ ಮಾರಕಾಸ್ತ್ರ ಸಮೇತ ಕೇಂದ್ರಕ್ಕೆ ನುಗ್ಗಿದ್ದ ಆರೋಪಿಗಳು, ಹಂದಿಗಳನ್ನು ಕದ್ದು ಎರಡು ಬೊಲೆರೊ ವಾಹನಗಳಲ್ಲಿ ತುಂಬಿದ್ದರು. ಶಬ್ದ ಕೇಳಿ ಎಚ್ಚರಗೊಂಡಿದ್ದ ದೂರುದಾರ ಸಂದೀಪ್ ಹಾಗೂಅವರ ತಂದೆ ರಾಮಕೃಷ್ಣಪ್ಪ, ಆರೋಪಿಗಳನ್ನು ತಡೆಯಲು ಮುಂದಾಗಿದ್ದರು. ಅವರಿಬ್ಬರ ಮೇಲೆಯೇ ಆರೋಪಿಗಳು ರಾಡ್‌ ಹಾಗೂ ಮಚ್ಚಿನಿಂದ ಹೊಡೆದು ಹಂದಿಗಳ ಸಮೇತ ಪರಾರಿಯಾಗಿದ್ದರು’ ಎಂದೂ ಹೇಳಿವೆ.

ಹಾಸನದಲ್ಲಿ ಹಂದಿ ಮಾರಿದ್ದ ಆರೋಪಿಗಳು: ‘ಕದ್ದ ಹಂದಿಗಳನ್ನು ಹಾಸನದ ಚನ್ನರಾಯನಪಟ್ಟಣಕ್ಕೆ ತೆಗೆದುಕೊಂಡು ಹೋಗಿದ್ದ ಆರೋಪಿಗಳು, ಕಿರಣ್ ಎಂಬಾತನಿಗೆ ಮಾರಿದ್ದರು. ಅದರಿಂದ ಬಂದ ಹಣವನ್ನು ಎಲ್ಲರೂ ಹಂಚಿಕೊಂಡು ತಮ್ಮೂರಿಗೆ ಹೋಗಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿ ಶಂಕರ್ ಸೇರಿ ಐವರು ಗಂಗಾವತಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲೂ ಸುಲಿಗೆ ಮಾಡಿದ್ದರು. ಈ ಪ್ರಕರಣದಲ್ಲಿ ಸಿಕ್ಕಿಬಿದ್ದು, ನ್ಯಾಯಾಂಗ ಬಂಧನದಲ್ಲಿದ್ದರು. ಇವರ ತಂಡದ ಸದಸ್ಯನೊಬ್ಬನನ್ನು ಪತ್ತೆ ಮಾಡಿದಾಗ, ಎಲ್ಲರ ಹೆಸರು ಗೊತ್ತಾಯಿತು. ಶಂಕರ್ ಹಾಗೂ ಇತರರನ್ನು ಬಾಡಿ ವಾರೆಂಟ್ ಮೂಲಕ ಕಸ್ಟಡಿಗೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡರು’ ಎಂದೂ ಪೊಲೀಸ್‌ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.