ADVERTISEMENT

ತೀರ್ಥಯಾತ್ರೆಗೆ ತೆರಳಿದ್ದ ವೇಳೆ ಚಿನ್ನ, ಕಾರು ಕಳ್ಳತನ; ಇಬ್ಬರು ಆರೋಪಿಗಳ ಸೆರೆ

ವಿದ್ಯಾರಣ್ಯಪುರ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 14:33 IST
Last Updated 19 ನವೆಂಬರ್ 2024, 14:33 IST
ಆರೋಪಿಗಳಿಂದ ಜಪ್ತಿ ಮಾಡಲಾದ ಆಭರಣಗಳನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪರಿಶೀಲಿಸಿದರು 
ಆರೋಪಿಗಳಿಂದ ಜಪ್ತಿ ಮಾಡಲಾದ ಆಭರಣಗಳನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪರಿಶೀಲಿಸಿದರು    

ಬೆಂಗಳೂರು: ಮನೆ ಮಾಲೀಕರು ತೀರ್ಥಯಾತ್ರೆಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಚಿನ್ನಾಭರಣ, ಕಾರು ಕದ್ದೊಯ್ದಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನಕಪುರ ರಸ್ತೆಯ ರಘುವನಹಳ್ಳಿಯ ದೀಪಕ್‌ ಹಾಗೂ ಪವನ್‌ ಬಂಧಿತರು.

ಬಂಧಿತರಿಂದ 308 ಗ್ರಾಂ. ಚಿನ್ನಾಭರಣ, 3 ಕೆ.ಜಿ ಬೆಳ್ಳಿ ಸಾಮಗ್ರಿ, ಎರಡು ಕಾರು ಹಾಗೂ ಆರು ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ₹41.36 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಎಚ್‌ಎಂಟಿ ಲೇಔಟ್‌ನ ನಿವಾಸಿ, ಕುಟುಂಬ ಸಮೇತ ಗುಜರಾತ್‌ಗೆ ತೀರ್ಥಯಾತ್ರೆಗೆಂದು ತೆರಳಿದ್ದರು. ವಾಪಸ್ ಬಂದು ಪರಿಶೀಲಿಸಿದಾಗ ಮನೆಯ ಮುಂದಿನ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ಮನೆಯ ಕೊಠಡಿಯ ಬೀರುವಿನಲ್ಲಿದ್ದ 10 ಗ್ರಾಂ. ಚಿನ್ನಾಭರಣ, ಏಳು ಕೆ.ಜಿ ಬೆಳ್ಳಿಯ ಸಾಮಗ್ರಿ ಹಾಗೂ ಕಾರು ಕಳ್ಳತನ ಆಗಿರುವುದು ಗೊತ್ತಾಗಿತ್ತು. ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

‘ಕನಕಪುರ ರಸ್ತೆಯ ಹಾರೋಹಳ್ಳಿ ಬಸ್ ನಿಲ್ದಾಣದ ಬಳಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ತನಿಖೆ ಮುಂದುವರಿಸಿದಾಗ ಆರೋಪಿಗಳು ನಗರದ ವಿವಿಧೆಡೆ ಚಿನ್ನ, ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿದ್ದು ಗೊತ್ತಾಯಿತು’ ಎಂದು ಪೊಲೀಸರು ತಿಳಿಸಿದರು.

‘ಕದ್ದ ಕಾರನ್ನು ಆರೋಪಿಗಳು, ಯಲಹಂಕ ನ್ಯೂಟೌನ್‌ನ ಕೆಂಪೇನಹಳ್ಳಿಯ ಪೀಕಾಕ್‌ ಗಾರ್ಡನ್‌ ಬಳಿಯ ಖಾಲಿ ಪ್ರದೇಶದಲ್ಲಿ ನಿಲುಗಡೆ ಮಾಡಿದ್ದರು. ಕದ್ದ ಚಿನ್ನವನ್ನು ಹೊಸಕೋಟೆಯ ಟ್ರೂ ಗೋಲ್ಡ್‌ ಮಳಿಗೆಗೆ ಮಾರಾಟ ಮಾಡಿದ್ದರು. ಅಲ್ಲಿಂದ ಕಾರು, ಚಿನ್ನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.‌

‘ಇಬ್ಬರೂ ಆರೋಪಿಗಳು ಏಳು ಮನೆಗಳ್ಳತನ ಪ್ರಕರಣ ಹಾಗೂ 13 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿ ಆಗಿರುವುದು ತನಿಖೆ ವೇಳೆ ಬಯಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ದೀಪಕ್‌ 
ಪವನ್ 
ಆರೋಪಿಗಳಿಂದ ಜಪ್ತಿ ಮಾಡಲಾದ ಕಾರು ಹಾಗೂ ಬೈಕ್‌ಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.