ಬೆಂಗಳೂರು: ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ₹ 18 ಲಕ್ಷ ಮೌಲ್ಯದ 31 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡುತ್ತಿದ್ದ ಸೈಯದ್ ಅಫ್ಜಲ್ ಮತ್ತು ಸಲ್ಮಾನ್ ಎಂಬುವರನ್ನು ಬಂಧಿಸಿ, ₹ 8 ಲಕ್ಷ ಮೌಲ್ಯದ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅ.15ರಂದು ಠಾಣಾ ವ್ಯಾಪ್ತಿಯ ಯಲಚೇನಹಳ್ಳಿ ನಿವಾಸಿಯೊಬ್ಬರ ದ್ವಿಚಕ್ರ ವಾಹನ ಕಳವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಬಾತ್ಮೀದಾರರು ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದರು.
‘ನಗರದ ವಿವಿಧೆಡೆ ಕಳವು ಮಾಡಿದ್ದ ವಾಹನಗಳನ್ನು ದೇವರಕೆರೆ ಪಾರ್ಕ್, ಜರಗನಹಳ್ಳಿ ಲಾರಿ ನಿಲ್ದಾಣದ ಖಾಲಿ ಜಾಗ ಹಾಗೂ ಅವರ ಮನೆ ಸಮೀಪ ಆರೋಪಿಗಳು ನಿಲುಗಡೆ ಮಾಡಿದ್ದರು. ಎಲ್ಲವನ್ನು ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರ ಬಂಧನದಿಂದ 11 ಕಳವು ಪ್ರಕರಣ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಆರೋಪಿಗಳು ಕದ್ದ ವಾಹನದಲ್ಲಿ ವ್ಹೀಲಿ ಮಾಡುತ್ತಿದ್ದರು ಹಾಗೂ ಸುತ್ತಾಡುತ್ತಿದ್ದರು. ಪೆಟ್ರೋಲ್ ಖಾಲಿಯಾದ ಬಳಿಕ ನಿಲ್ಲಿಸಿ ಹೋಗುತ್ತಿದ್ದರು. ಬೈಕ್‌ನಲ್ಲಿ ಜಾಲಿ ರೈಡ್ ಹೋಗುವ ಉದ್ದೇಶದಿಂದ ವಾಹನ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
14 ದ್ವಿಚಕ್ರ ವಾಹನ ವಶ:
ಮಡಿವಾಳ ಠಾಣಾ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿ, ₹ 10 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಎನ್.ಎಸ್.ಪಾಳ್ಯ ನಿವಾಸಿಯೊಬ್ಬರು ಹೊಸೂರು ಮುಖ್ಯರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಆಗಿತ್ತು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವೆಡೆ ಕಳವು ಮಾಡಿರುವುದು ಗೊತ್ತಾಗಿದೆ.
‘ಆರೋಪಿ ನೀಡಿದ ಮಾಹಿತಿ ಮೇರೆಗೆ ಸಿಲ್ಕ್ ಬೋರ್ಡ್ ಬಳಿ ಇರುವ ಸ್ಮಶಾನದ ಕಾಂಪೌಂಡ್ ಪಕ್ಕ, ಮಡಿವಾಳ ಮಾರುಕಟ್ಟೆ, ಕಾವೇರಿ ಸ್ಕೂಲ್ ಬಳಿ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈತನ ಬಂಧನದಿಂದ 9 ಪ್ರಕರಣಗಳು ಪತ್ತೆಯಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.