ಬೆಂಗಳೂರು: ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಸಂಪಿಗೆ ಚಿತ್ರಮಂದಿರದ ಮಾಲೀಕ ನಾಗೇಶ್ ಅವರ ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿದ್ದ ನೇಪಾಳದ ಮೂವರು ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೇಪಾಳದ ಕೊಡಾರಿ ರಾಜ್ಯದ ಕಾಲಿಕೋಟ್ ಜಿಲ್ಲೆ ಲಾಲು ಗ್ರಾಮದ ಪ್ರಕಾಶ್, ಜಗದೀಶ್ ಶಾಹಿ ಹಾಗೂ ಅಪೀಲ್ ಶಾಹಿ ಬಂಧಿತರು. ಪ್ರಕರಣದ ಪ್ರಮುಖ ಆರೋಪಿಗಳಾದ ದಂಪತಿ ಗಣೇಶ್ ಹಾಗೂ ಗೀತಾ ನಾಪತ್ತೆ ಆಗಿದ್ದಾರೆ.
ವರ್ತೂರಿನ ಮನೆಯಲ್ಲಿ ಆರೋಪಿಯೊಬ್ಬ ಬಚ್ಚಿಟ್ಟಿದ್ದ 1 ಕೆ.ಜಿ 600 ಗ್ರಾಂ ಚಿನ್ನಾಭರಣ, 450 ಗ್ರಾಂ ಬೆಳ್ಳಿ ಸಾಮಗ್ರಿ, ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಅನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಅಕ್ಟೋಬರ್ 21ರಂದು ನಾಗೇಶ್ ಅವರು ಜಯನಗರದ 3ನೇ ಬ್ಲಾಕ್‌ನಲ್ಲಿರುವ ತಮ್ಮ ಮನೆಯಲ್ಲಿದ್ದಾಗಲೇ, ಆರೋಪಿಗಳು ಚಿನ್ನಾಭರಣ, ನಗದು ದೋಚಿ ಪರಾರಿ ಆಗಿದ್ದರು. ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ದಂಪತಿ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಔಷಧ ಬೆರೆಸಿ ಕುಡಿಸಿದ್ದರು: ನಾಗೇಶ್ ಅವರ ಮನೆಯಲ್ಲಿ ಎರಡು ವರ್ಷಗಳಿಂದಲೂ ನೇಪಾಳದ ಗಣೇಶ್ ಹಾಗೂ ಗೀತಾ ದಂಪತಿ ಕೆಲಸ ಮಾಡಿಕೊಂಡಿದ್ದರು. ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣಕ್ಕೆ ನಾಗೇಶ್ ಅವರನ್ನು ಹೊರತುಪಡಿಸಿ ಮನೆಯವರೆಲ್ಲರೂ ತೆರಳಿದ್ದರು. ಮನೆಯಲ್ಲಿ ಒಂಟಿಯಾಗಿದ್ದ ನಾಗೇಶ್ ಅವರು ಮದ್ಯಪಾನ ಮಾಡುವಾಗ ಆರೋಪಿ ದಂಪತಿ ಪ್ರಜ್ಞೆ ತಪ್ಪಿಸುವ ಔಷಧ ಬೆರೆಸಿ ಕುಡಿಸಿದ್ದರು. ಬಳಿಕ, ಉಳಿದ ಆರೋಪಿಗಳ ನೆರವಿನಿಂದ ಮನೆಯಲ್ಲಿದ್ದ 2 ಕೆಜಿ 500 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳೂ ಸೇರಿದಂತೆ ₹5 ಲಕ್ಷ ನಗದು ಕದ್ದು ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.
‘ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಹಾಗೂ ಮೊಬೈಲ್ ನೆಟ್‌ವರ್ಕ್ ಲೊಕೇಶನ್ ಆಧರಿಸಿ ಹೈದರಾಬಾದ್, ಮುಂಬೈ, ಗುಜರಾತ್‌ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ದಂಪತಿ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.