ಬೆಂಗಳೂರು: ರಾಜಸ್ಥಾನದ ‘ಚೋಖಿ ಧನಿ’ ಮಾದರಿಯಲ್ಲಿ ಇಲ್ಲಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಅಭಿವೃದ್ಧಿಪಡಿಸುವ ಯೋಜನೆಗೆ ರಾಜ್ಯ ಸರ್ಕಾರ ಅನುದಾನ ಒದಗಿಸಿಲ್ಲ. ಇದರಿಂದಾಗಿ ಕಲಾಗ್ರಾಮಕ್ಕೆ ಕಾಯಕಲ್ಪ ಇಲ್ಲವಾಗಿದೆ.
ಕಲಾಗ್ರಾಮಕ್ಕೆ ಕಾಯಕಲ್ಪ ನೀಡಲು ಮುಂದಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಳೆದ ವರ್ಷ ಇದರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿತ್ತು. ಇದನ್ನು ಸರ್ಕಾರ ಬಜೆಟ್‌ನಲ್ಲಿಯೂ ಘೋಷಿಸಿತ್ತು. ಬಳಿಕ ಇಲಾಖೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ರೂಪಿಸಿ, ಅನುಮೋದನೆಗೆ ಮೂಲಸೌಲಭ್ಯ ಇಲಾಖೆಗೂ (ಐಡಿಡಿ) ಕಳುಹಿಸಿತ್ತು. ರಾಜಸ್ಥಾನದಲ್ಲಿ ಚೋಖಿ ಧನಿ ಗ್ರಾಮವನ್ನು ಅಭಿವೃದ್ಧಿಪಡಿಸಿದಂತೆ ಇಲ್ಲಿನ ಕಲಾಗ್ರಾಮವನ್ನು ಅಭಿವೃದ್ಧಿಪಡಿಸಲು ಇಲಾಖೆ ಚೋಖಿ ಧನಿ ಗ್ರೂಪ್ ಅನ್ನು ಸಂಪರ್ಕಿಸಿತ್ತು. ಆದರೆ, ಅವರು ಒಪ್ಪದ ಕಾರಣ ಇಲ್ಲಿನ ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿತ್ತು. ಆದರೆ, ಸರ್ಕಾರದಿಂದ ಅನುದಾನ ಮಂಜೂರಾಗದ ಕಾರಣ ಅಭಿವೃದ್ಧಿ ಕಾರ್ಯ ನಡೆದಿಲ್ಲ.
30 ಎಕರೆಯಲ್ಲಿ ವ್ಯಾಪಿಸಿಕೊಂಡಿರುವ ಕಲಾಗ್ರಾಮವನ್ನು ಸಂಸ್ಕೃತಿ ಇಲಾಖೆ ನಿರ್ವಹಣೆ ಮಾಡುತ್ತಿದೆ. ಸೂಕ್ತ ಮೂಲಸೌಕರ್ಯ ಇಲ್ಲದ ಕಾರಣ ಕಲಾಗ್ರಾಮದಲ್ಲಿ ಪ್ರತಿವರ್ಷ ಬೆರಳಣಿಕೆಯಷ್ಟು ಕಾರ್ಯಕ್ರಮಗಳಷ್ಟೇ ನಡೆಯುತ್ತಿವೆ. ಕಲಾವಿದರಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯ ಇಲ್ಲದಿರುವುದರಿಂದ ಕಲಾ ಶಿಬಿರ, ತರಬೇತಿ ಹಾಗೂ ಪ್ರದರ್ಶನಗಳಿಗೆ ಕೂಡ ಸಮಸ್ಯೆಯಾಗುತ್ತಿದೆ. ಹೀಗಾಗಿ, ಕಲಾಗ್ರಾಮಕ್ಕೆ ಕಾಯಕಲ್ಪ ನೀಡಬೇಕೆಂಬ ಆಗ್ರಹ ಕಲಾವಿದರ ವಲಯದಲ್ಲಿತ್ತು. ಅಲ್ಲಿ ನಿರಂತರ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಹಾಗೂ ಪ್ರವಾಸಿಗರನ್ನು ಸೆಳೆಯಲು ಇಲಾಖೆ ಮುಂದಾಗಿತ್ತು.
ಮನೋರಂಜನೆ ಜತೆಗೆ ಆತಿಥ್ಯ: ರಾಜಸ್ಥಾನದಲ್ಲಿ ಚೋಖಿ ಧನಿ ಗ್ರಾಮವನ್ನು ಚೋಖಿ ಧನಿ ಗ್ರೂಪ್ ಅಭಿವೃದ್ಧಿಪಡಿಸಿದೆ. ಅಲ್ಲಿ ಸ್ಥಳೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲಾಗುತ್ತಿದೆ. ಪ್ರವಾಸಿ ತಾಣವಾಗಿಯೂ ಇದು ಪ್ರಸಿದ್ಧಿ ಪಡೆದಿದೆ. ಇಲ್ಲಿ ರಾಜಸ್ಥಾನದ ಕಲಾ ಪ್ರಕಾರಗಳ ಜತೆಗೆ ಅಲ್ಲಿನ ಆಹಾರವನ್ನೂ ಸವಿಯುವ ಅವಕಾಶ ಇದೆ. ವಿವಿಧ ದರ್ಜೆಯ ಹೋಟೆಲ್‌ಗಳನ್ನೂ ನಿರ್ಮಿಸಲಾಗಿದೆ. ಸ್ಥಳೀಯ ಕಲಾವಿದರಿಗೆ ಪ್ರದರ್ಶನಗಳನ್ನು ನಡೆಸಲು ಅವಕಾಶ ಒದಗಿಸಲಾಗಿದೆ. ವಿವಿಧ ಕಲಾ ಉತ್ಸವಗಳನ್ನೂ ನಡೆಸಲಾಗುತ್ತಿದೆ. ಇದೇ ಮಾದರಿ ವಿವಿಧ ಸಾಂಸ್ಕೃತಿಕ ಚಟುವಟಿಗಳ ಜತೆಗೆ ವಸತಿ, ಆಹಾರ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಥೀಮ್ ಪಾರ್ಕ್ ಸೇರಿ ಹಲವು ವೈವಿಧ್ಯಗಳನ್ನು ಒಂದೇ ಸೂರಿನಡಿ ತರುವುದು ಯೋಜನೆಯಲ್ಲಿತ್ತು.
ನಾನು ಅಧಿಕಾರವಹಿಸಿಕೊಂಡು ಮೂರು ತಿಂಗಳಾಗಿವೆ. ಮಲ್ಲತ್ತಹಳ್ಳಿಯ ಕಲಾಗ್ರಾಮ ಅಭಿವೃದ್ಧಿ ಯೋಜನೆ ಏನಾಗಿದೆ ಎನ್ನುವುದರ ಬಗ್ಗೆ ಪರಿಶೀಲಿಸುತ್ತೇನೆ.- ವಿಶ್ವನಾಥ ಹಿರೇಮಠ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ
‘ಕಲಾಗ್ರಾಮದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಖಾಸಗಿ ಸಂಸ್ಥೆಗಳನ್ನೂ ಸಂಪರ್ಕಿಸಲಾಗಿತ್ತು. ‘ಚೋಖಿ ಧನಿ’ ಮಾದರಿ ಅಭಿವೃದ್ಧಿಯಿಂದ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗುತ್ತಿತ್ತು. ನಾಟಕ, ಯಕ್ಷಗಾನ, ಜಾನಪದ ನೃತ್ಯ, ಸಂಗೀತ ಸೇರಿ ರಾಜ್ಯದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ಸಿಗುತ್ತಿತ್ತು. ಆದರೆ, ಅನುದಾನ ನೀಡದಿದ್ದರಿಂದ ಇದು ನನೆಗುದಿಗೆ ಬಿದ್ದಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.