ADVERTISEMENT

ಹೈನುಗಾರರ ಆತ್ಮಹತ್ಯೆ ಪ್ರಕರಣಗಳೇ ಇಲ್ಲ: ಸುರೇಶ ಹೊನ್ನಪ್ಪಗೋಳ

 ರೈತರು-ವಿಜ್ಞಾನಿಗಳ ಸಂವಾದ ಸಭೆಯಲ್ಲಿ ಸುರೇಶ ಹೊನ್ನಪ್ಪಗೋಳ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 19:48 IST
Last Updated 31 ಅಕ್ಟೋಬರ್ 2024, 19:48 IST
<div class="paragraphs"><p>&nbsp;ರೈತರು-ವಿಜ್ಞಾನಿಗಳ&nbsp;ಸಂವಾದ</p></div>

 ರೈತರು-ವಿಜ್ಞಾನಿಗಳ ಸಂವಾದ

   

ಬೆಂಗಳೂರು: ‘ಕೃಷಿಯನ್ನು ನಂಬಿದವರು ಮಳೆ, ಬೆಳೆ, ಬೆಲೆ ಕೈಕೊಟ್ಟಾಗ ಆರ್ಥಿಕ ದುಃಸ್ಥಿತಿ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಿವೆ. ಹೈನುಗಾರಿಕೆಯನ್ನೇ ಮುಖ್ಯ ಕಸುಬಾಗಿ ಮಾಡಿಕೊಂಡವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇಲ್ಲವೇ ಇಲ್ಲ’ ಎಂದು ಕೇಂದ್ರ ಸರ್ಕಾರದ ಪಶುಸಂಗೋಪನಾ ಇಲಾಕೆ ಮಾಜಿ ಆಯುಕ್ತ ಸುರೇಶ ಹೊನ್ನಪ್ಪಗೋಳ ತಿಳಿಸಿದರು.

ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ (ಎನ್‌ಐಎಎನ್‌ಪಿ) ನಗರದ ಐಸಿಎಆರ್‌–ಎನ್‌ಐಎಎನ್‌ಪಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆ ಅಡಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ರೈತರು–ವಿಜ್ಞಾನಿಗಳ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಪಶುಸಂಗೋಪನೆ ಎನ್ನುವುದು ರೈತರಿಗೆ ಎಟಿಎಂ ಇದ್ದಂತೆ. ನಿಗದಿತ ಆದಾಯ ನಿರಂತರವಾಗಿ ಬರುತ್ತಿರುತ್ತದೆ. ಕೃಷಿ ಜಿಡಿಪಿ ಮತ್ತು ರಾಷ್ಟ್ರೀಯ ಜಿಡಿಪಿಗೆ ಪಶುಸಂಗೋಪನೆಯ ಕೊಡುಗೆ ಅಧಿಕವಿದೆ ಎಂದು ಹೇಳಿದರು.

ನಗರೀಕರಣದ ಹೊರತಾಗಿಯೂ ಪ್ರಾಣಿಗಳನ್ನು ಸಾಕುವ ಅಭ್ಯಾಸವನ್ನು ರೈತರು ಮುಂದುವರಿಸಬೇಕು. ಕುಟುಂಬ ಬೆಳೆದಂತೆ ಹಿಡುವಳಿ ವಿಸ್ತೀರ್ಣವೂ ಚಿಕ್ಕದಾಗುತ್ತಾ ಹೋಗುತ್ತದೆ. ಪ್ರಾಣಿಗಳನ್ನು ಸಾಕಿದರೆ, ಕುಟುಂಬ ಬೆಳೆದಂತೆ ಪ್ರಾಣಿಗಳ ಸಂಖ್ಯೆಯೂ ಬೆಳೆಯುತ್ತದೆ ಎಂದು ವಿವರಿಸಿದರು.

ಐಸಿಎಆರ್‌–ಎನ್‌ಐಎಎನ್‌ಪಿ ನಿರ್ದೇಶಕ ಅರ್ಥಬಂಧು ಸಾಹೂ ಮಾತನಾಡಿ, ‘ಹೈನುಗಾರಿಕೆ ಲಾಭದಾಯಕ ಮಾತ್ರವಲ್ಲ, ಆರೋಗ್ಯಕ್ಕೆ ಬೇಕಾದ ಪೌಷ್ಟಿಕಾಂಶ ಮತ್ತು ಸಮತೋಲಿತ ಆಹಾರವೂ ಅದರಿಂದ ದೊರೆಯುತ್ತದೆ’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ರೈತರ ಮನೆ ಬಾಗಿಲಿಗೆ ಈ ರೀತಿಯ ಚಟುವಟಿಕೆಗಳನ್ನು ಒಯ್ಯಲಾಗುವುದು’ ಎಂದರು.

ಹೈನುಗಾರಿಕೆ, ಸಣ್ಣ ಮೆಲುಕು ಹಾಕುವ ಪ್ರಾಣಿಗಳ ಸಾಕಾಣಿಕೆ ಮತ್ತು ಹಿತ್ತಲಿನಲ್ಲಿ ಕೋಳಿ ಸಾಕಣೆಗೆ ಸಂಬಂಧಿಸಿದ ಪರಿಕರಗಳನ್ನು ರೈತರಿಗೆ ವಿತರಿಸಲಾಯಿತು.

ಪಶುಪಾಲನೆ ಮತ್ತು ಪಶುವೈದ್ಯ ಸೇವಾ ನಿರ್ದೇಶಕ ಜಿ.ಟಿ. ರಾಮಯ್ಯ, ಡಿಎಪಿಎಸ್‌ಸಿ ನೋಡಲ್ ಅಧಿಕಾರಿಗಳಾದ ರಂಗಸಾಮಿ ಎ.,  ಕೃಷ್ಣಪ್ಪ ಬಳಗಾನೂರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.