ಬೆಂಗಳೂರು: ನಗರದಲ್ಲಿ ಮಳೆ, ಬಿರುಗಾಳಿಯಿಂದ ಸಾಕಷ್ಟು ಮರಗಳು ಉರುಳಿವೆ. ರಸ್ತೆ– ಚರಂಡಿಗಳಲ್ಲಿ ನೀರು ನಿಂತಿದೆ, ಗುಂಡಿಗಳಾಗಿವೆ. ಮನೆಗಳಿಗೆ ನೀರು ನುಗ್ಗುತ್ತಿದೆ. ರಸ್ತೆ ಬದಿಯಲ್ಲಿ ಮರಗಳ ರೆಂಬೆ–ಕೊಂಬೆಗಳು ಹಾಗೆಯೇ ಉಳಿದಿವೆ. ಹಲವೆಡೆ ಓಡಾಡಲೂ ಜನರಿಗೆ ಸಮಸ್ಯೆಯಾಗುತ್ತಿದೆ. ಈ ಸಂಕಷ್ಟಗಳನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಶಾಸಕರು ಪರಿಹರಿಸುತ್ತಾರೆಯೇ? ಎಲ್ಲರ ಮನೆ ಬಳಿಗೆ ಇವರು ಹೋಗಲು ಸಾಧ್ಯವೇ? ಜನರು–ಅಧಿಕಾರಿಗಳ ನಡುವಿನ ಕೊಂಡಿಯಂತಿದ್ದ ಕಾರ್ಪೊರೇಟರ್‌ಗಳು ಇಲ್ಲದ್ದರಿಂದ ಅಧಿಕಾರಿಗಳು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಇಲ್ಲ...
ಬಿಬಿಎಂಪಿಯಲ್ಲಿ ಆಡಳಿತ ಪಕ್ಷದ ನಾಯಕ, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದವರ ಮಾತುಗಳಿವು.
‘ಒಂದು ಮನೆಯ ಕಸ ತೆಗೆಯದಿದ್ದರೆ, ನೀರು ನುಗ್ಗಿದರೆ, ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ ಮೊದಲು ಜನರು ಸಂಪರ್ಕಿಸುತ್ತಿದ್ದುದು ಕಾರ್ಪೊರೇಟರ್‌ಗಳನ್ನ. ಇದೀಗ ಅವರಿಲ್ಲ, ಹೀಗಾಗಿ ಮಾಜಿಯಾಗಿದ್ದರೂ ನಮ್ಮನ್ನು ಕೇಳುತ್ತಾರೆ. ಅಧಿಕಾರ ಇಲ್ಲದಿದ್ದರೆ ಅಧಿಕಾರಿಗಳು ನಮ್ಮ ಮಾತು ಕೇಳುವುದಿಲ್ಲ. ಆದರೂ ಒತ್ತಾಯಿಸಿ, ಆಗ್ರಹಿಸಿ ಕೆಲಸ ಮಾಡಿಸುತ್ತೇವೆ. ವಾರ್ಡ್‌ಗಳು ಬದಲಾಗಿರುವುದರಿಂದ, ನಾಲ್ಕು ವರ್ಷದಲ್ಲಿ ಅಧಿಕಾರಿಗಳು ಬದಲಾಗಿರುವುದರಿಂದ ಬಹಳಷ್ಟು ಜನ ನಮ್ಮ ಮಾತು ಕೇಳುವುದಿಲ್ಲ. ಕೌನ್ಸಿಲ್ ಇದ್ದು, ಸಭೆ ನಡೆಯುತ್ತಿದ್ದರೆ ಅಧಿಕಾರಿಗಳು ನಿಯಂತ್ರಣದಲ್ಲಿ ಇರುತ್ತಿದ್ದರು’ ಎಂದು ಪಾಲಿಕೆಯ ಮಾಜಿ ನಾಯಕರು ಹೇಳುತ್ತಾರೆ.
‘198ರಿಂದ 243 ವಾರ್ಡ್ ಆಯಿತು. ನಂತರ ಅದನ್ನು 225ಕ್ಕೆ ಇಳಿಸಲಾಯಿತು. ಮೀಸಲಾತಿಯನ್ನು ನಿಗದಿಪಡಿಸದಿರುವುದು ಚುನಾವಣೆಗೆ ತಡೆಯಾಗಿದೆ. ಎಲ್ಲ ಪಕ್ಷದ ಶಾಸಕರಿಗೂ ಬಿಬಿಎಂಪಿ ಚುನಾವಣೆ ಬೇಕಿಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆ ಎಂದೆಲ್ಲ ಹೇಳಿ ನಮ್ಮ ಮೂಗಿಗೆ ತುಪ್ಪ ಸವರಿ, ಕೆಲಸ ಮಾಡಿಸಿಕೊಂಡರು. ಆದರೆ, ಬಿಬಿಎಂಪಿಗೆ ಚುನಾವಣೆ ಮಾಡಿ ಎಂದರೆ ಒಬ್ಬರು ಇನ್ನೊಬ್ಬರ ಮೇಲೆ ಹೇಳುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೋಲಿನ ಭಯ: ‘ನಗರದಲ್ಲಿ ಲೋಕಸಭೆ ಚುನಾವಣೆಯನ್ನು ಸೋತಿರುವ ಕಾಂಗ್ರೆಸ್‌ಗೆ ಬಿಬಿಎಂಪಿ ಚುನಾವಣೆಯಲ್ಲಿ ಸೋಲುವ ಭಯ ಉಂಟಾಗಿದೆ. ಆದ್ದರಿಂದಲೇ ವಿಭಜನೆಯ ಮಾತನಾಡಿ, ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದೆ’ ಎಂಬು ಬಿಜೆಪಿಯ ನಾಯಕರು ದೂರಿದರು.
‘ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿದ್ದೇವೆ. ಲೋಕಸಭೆ ಚುನಾವಣೆಗೂ ಪಾಲಿಕೆ ಚುನಾವಣೆಗೂ ವ್ಯತ್ಯಾಸವಿದೆ. ಅದಕ್ಕೆಲ್ಲ ನಾವು ಹೆದರುತ್ತಿಲ್ಲ. ಉತ್ತಮ ಆಡಳಿತ ನೀಡುವುದಷ್ಟೇ ನಮ್ಮ ಗುರಿ’ ಎಂದು ಕಾಂಗ್ರೆಸ್ ನಾಯಕರು ಹೇಳಿದರು.
ಗ್ರಾಮ ಪಂಚಾಯಿತಿಗಳಾಗುವ ಆತಂಕ: ‘ಬಿಬಿಎಂಪಿಯನ್ನು ವಿಭಜಿಸಿ 400 ವಾರ್ಡ್ ಮಾಡಿದರೆ ಇದು ಪುರಸಭೆ, ಗ್ರಾಮ ಪಂಚಾಯಿತಿಯಂತಾಗುತ್ತದೆ. ಹೆಚ್ಚಿನ ಆದಾಯವಿರುವ ಪಾಲಿಕೆ ಅಭಿವೃದ್ಧಿಯಾದರೆ, ಮತ್ತೊಂದು ಕುಸಿಯುತ್ತದೆ. ಮೇಲು–ಕೀಳು ಎಂಬ ಭಾವನೆ ಉದ್ಭವಿಸುತ್ತದೆ. ದೆಹಲಿಯಲ್ಲಿ ಪಾಲಿಕೆ ವಿಭಜನೆ ವಿಫಲವಾಗಿದ್ದು ಇದಕ್ಕೊಂದು ಉದಾಹರಣೆ. ಇನ್ನು, ನಾಲ್ಕೈದು ಪಾಲಿಕೆಯಾದರೆ ಭಾಷಾವಾರು ಸಂಘರ್ಷವಾಗುವ ಆತಂಕವೂ ಇದೆ. ಒಟ್ಟಾರೆ ನಗರದ ‘ಬ್ರ್ಯಾಂಡ್’ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ಪಾಲಿಕೆಯ ಮಾಜಿ ನಾಯಕರು ಅಭಿಪ್ರಾಯಪಟ್ಟರು.
74ರ ತಿದ್ದುಪಡಿ ಪ್ರಕಾರ ಏನೂ ನಡೆಯುತ್ತಿಲ್ಲ. ಪ್ರಜಾಪ್ರಭುತ್ವವನ್ನು ಉಳಿಸಿ ಜನಪ್ರತಿನಿಧಿಗಳಿಗೆ ಅಧಿಕಾರ ನೀಡಲು ಯಾರಿಗೂ ಇಷ್ಟವಿಲ್ಲ. ಬೆಂಗಳೂರು ಅಭಿವೃದ್ಧಿ ಬಗ್ಗೆ ಯಾರಿಗೂ ಚಿಂತನೆ ಇಲ್ಲ. ಚುನಾವಣೆ ಮುಂದೂಡಬೇಕು ಎಂದೇ ಐದು ಪಾಲಿಕೆ ಮಾಡುತ್ತೇವೆ ವಿಭಜನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದೆಲ್ಲ ಒಂದು ತಂತ್ರ. ‘
–ಪದ್ಮನಾಭರೆಡ್ಡಿ
ನಗರದಲ್ಲಿರುವ ಐದಾರು ಶಾಸಕರನ್ನು ಹೊರತುಪಡಿಸಿದರೆ ಇನ್ನಾರಿಗೂ ಬಿಬಿಎಂಪಿಗೆ ಚುನಾವಣೆ ನಡೆಸಲು ಇಷ್ಟ ಇಲ್ಲ. ಎಲ್ಲ ಅಧಿಕಾರವನ್ನೂ ಪ್ಯಾಕೇಜ್‌ಗಳನ್ನೂ ತಾವೊಬ್ಬರೇ ನಿರ್ವಹಿಸಬೇಕು ಎಂದು ಸಂವಿಧಾನದತ್ತವಾದ ಅಧಿಕಾರವನ್ನು ಸ್ಥಳೀಯ ಸಂಸ್ಥೆಯಿಂದ ಕಿತ್ತುಕೊಂಡಿದ್ದಾರೆ. ಅದನ್ನೇ ಮುಂದುವರಿಸುವ ಹುನ್ನಾರವೂ ಇದೆ. ಚುನಾವಣೆ ಮೊದಲು ನಂತರ ಎಲ್ಲ.
–ಎನ್. ನಾಗರಾಜು
ಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಗರವನ್ನು ಸುಸಜ್ಜಿತವಾಗಿ ಕಟ್ಟಿದ್ದರು. ಅಂತಹ ನಾಡನ್ನು ಕಾಂಗ್ರೆಸ್‌ನವರು ಹೋಳು ಮಾಡುತ್ತಿದ್ದಾರೆ ಒಡೆದು ಆಳಲು ಪ್ರಯತ್ನಿಸುತ್ತಿದ್ದಾರೆ. ಇದು ಸಮುದಾಯಕ್ಕೇ ಮಾಡುತ್ತಿರುವ ಮೋಸ. ಅಲ್ಲದೆ ಕಾರ್ಪೊರೇಟರ್‌ಗಳಿಲ್ಲದೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜನರು–ಅಧಿಕಾರಿಗಳ ನಡುವೆ ಕೊಂಡಿಯಾಗಿರುವ ಜನಪ್ರತಿನಿಧಿಗಳು ಎಂದಿಗೂ ಇರಬೇಕು.
– ಎ.ಎಚ್. ಬಸವರಾಜು
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲೇಬೇಕು. ಯಾರ ರೀತಿಯಲ್ಲಾದರೂ ವಿಭಾಗ ಮಾಡಲಿ ಆದರೆ ಚುನಾವಣೆಯನ್ನು ಮೊದಲು ಮಾಡಬೇಕು. ಸರ್ಕಾರದಿಂದ ಚುನಾವಣೆ ನಡೆಸುವ ಭರವಸೆ ದೊರೆತಿದೆ. ಕಾರ್ಪೊರೇಟರ್‌ಗಳು ಇಲ್ಲದಿರುವುದರಿಂದ ಸ್ಥಳೀಯ ಸಮಸ್ಯೆಗಳು ನಿವಾರಣೆಯಾಗುತ್ತಿಲ್ಲ. ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ. ಕೆಲಸವನ್ನೂ ಮಾಡುತ್ತಿಲ್ಲ.
– ಎಂ. ಶಿವರಾಜ್
74ನೇ ತಿದ್ದುಪಡಿ ಪ್ರಕಾರ ಚುನಾವಣೆ ನಡೆಯಬೇಕು ಸ್ಥಳೀಯ ಸಂಸ್ಥೆಗಳೇ ಅಧಿಕಾರ ನಡೆಸಬೇಕು ಯಾರೂ ಮೂಗು ತೂರಿಸುವಂತಿಲ್ಲ. ಆದರೆ ರಾಜೀವ್‌ಗಾಂಧಿಯವರ ಆಶಯವನ್ನು ಪಾಲಿಸದೆ ಕಾಂಗ್ರೆಸ್‌ನವರು ತಮ್ಮ ಪಕ್ಷದ ನಾಯಕನಿಗೇ ಅಪಮಾನ ಮಾಡುತ್ತಿದ್ದಾರೆ. ಅಲ್ಲದೆ ನಗರ ನಿರ್ಮಾತೃ ಕೆಂಪೇಗೌಡರ ಪಾಲಿಕೆಯನ್ನು ವಿಭಜಿಸಿ ಅವರಿಗೆ ಅವಮಾನ ಮಾಡಲು ಹೊರಟಿದ್ದಾರೆ. – ಎನ್.ಆರ್. ರಮೇಶ್ ‘ಆರು ತಿಂಗಳಿಗಿಂತ ಹೆಚ್ಚು ಖಾಲಿ ಇರಬಾರದು’ ರಾಜೀವ್‌ಗಾಂಧಿ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದರು. ಯಾವುದೇ ಸ್ಥಳೀಯ ಸಂಸ್ಥೆಗೆ ಆರು ತಿಂಗಳಿಗಿಂತ ಹೆಚ್ಚು ಅವಧಿಗೆ ಆಡಳಿತಾಧಿಕಾರಿ ಇರಬಾರದು ಎಂದು ನಿಯಮ ಮಾಡಿದ್ದರು. ಆದರೆ ವರ್ಷಗಟ್ಟಲೆ ಆಡಳಿತಾಧಿಕಾರಿ ಇದ್ದಾರೆ. ಕಾರ್ಪೊರೇಟರ್‌ಗಳು ಇಲ್ಲದಿರುವುದರಿಂದ ಹಲವು ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸುತ್ತಿಲ್ಲ.
– ಎಂ. ಉದಯಶಂಕರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.