ADVERTISEMENT

ಕಲಾಗ್ರಾಮದಲ್ಲಿ ರಂಗಮಂದಿರವಿಲ್ಲ!

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಪಷ್ಟನೆ: ಚರ್ಚೆಗೆ ಗ್ರಾಸವಾದ ಇಲಾಖೆ ಉತ್ತರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 20:39 IST
Last Updated 24 ಡಿಸೆಂಬರ್ 2020, 20:39 IST
ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯ
ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯ   

ಬೆಂಗಳೂರು: ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿನ ಸಾಂಸ್ಕೃತಿಕ ಸಮುಚ್ಚಯವನ್ನು ರಂಗಮಂದಿರ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಗಣಿಸದಿರುವುದು ಸಾಂಸ್ಕೃತಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ಕೆಂಗೇರಿ ಉಪನಗರದ ಅಜಯ್ ಕುಮಾರ್ ಎ.ಜೆ. ಎನ್ನುವುವವರು ಕಲಾ ಗ್ರಾಮದ ರಂಗಮಂದಿರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೇಳಿದ್ದರು. ಇದಕ್ಕೆ ಇಲಾಖೆಯ ಜಂಟಿ ನಿರ್ದೇಶಕರು ‘ಕಲಾಗ್ರಾಮದಲ್ಲಿ ರಂಗಮಂದಿರ ಇರುವುದಿಲ್ಲ’ ಎಂದು ಉತ್ತರಿಸಿದ್ದಾರೆ.

ನಗರದಲ್ಲಿನ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಸುಲಭವಾಗಿ ದೊರೆಯುತ್ತಿದ್ದ ಸಾಂಸ್ಕೃತಿಕ ಸಮುಚ್ಚಯದಲ್ಲಿ ತಿಂಗಳ ಬಹುತೇಕ ದಿನ ಒಂದಲ್ಲ ಒಂದು ಕಲಾ ಚಟುವಟಿಕೆ ನಡೆಯುತ್ತಿತ್ತು. ಆದರೆ, ಎರಡು ವರ್ಷಗಳ ಹಿಂದೆ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಅವಘಡ ಘಟಿಸಿ ಅಲ್ಲಿನ ಧ್ವನಿ–ಬೆಳಕಿನ ವ್ಯವಸ್ಥೆ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಅದನ್ನು ದುರಸ್ತಿಪಡಿಸಿ ಮತ್ತೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಕಲಾವಿದರು ಪ್ರತಿಭಟಿಸಿದ್ದರು. ಅದರ ದುರಸ್ತಿಗೆ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಲಾಗಿತ್ತು. ಅಲ್ಲಿ ಇನ್ನೂ ರಂಗ ಚಟುವಟಿಕೆ ಪ್ರಾರಂಭ ಮಾಡದಿರುವುದು ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

‘ಸಾಂಸ್ಕೃತಿಕ ಸಮುಚ್ಚಯದಲ್ಲಿ ರಂಗ ಚಟುವಟಿಕೆ ನಡೆಸುತ್ತಾ ಬರಲಾಗಿದೆ. ಅದು ಕಲಾವಿದರಿಗೆ ಸುಲಭವಾಗಿ ದೊರೆಯುತ್ತಿತ್ತು. ಆದರೆ, ಈಗ ಕಲಾಗ್ರಾಮದಲ್ಲಿ ರಂಗ ಮಂದಿರವೇ ಇಲ್ಲ ಎಂದು ಇಲಾಖೆ ಹೇಳುತ್ತಿದೆ. ಹಾಗಿದ್ದರೆ ಸಾಂಸ್ಕೃತಿಕ ಸಮುಚ್ಚಯ ಏನಾಯಿತು? ಇಲಾಖೆಯ ಜಾಲತಾಣದಲ್ಲಿ ಬುಕ್ಕಿಂಗ್‌ ಆಯ್ಕೆಯನ್ನೂ ಸ್ಥಗಿತಗೊಳಿಸಲಾಗಿದೆ’ ಎಂದು ಕಲಾವಿದರು ಕಳವಳ ವ್ಯಕ್ತಪಡಿಸಿದ್ದಾರೆ.

ಸಮುಚ್ಚಯ ಭವನ: ‘ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯವನ್ನು ರಂಗಮಂದಿರ ಎಂದು ಪರಿಗಣಿಸಲು ಬರುವುದಿಲ್ಲ. ಅದು ಸಮುಚ್ಚಯ ಭವನ. ಅಲ್ಲಿ ಎಲ್ಲ ಬಗೆಯ ಕಲಾ ಚಟುವಟಿಕೆಗಳು ನಡೆಯಲಿವೆ. ರಂಗ ಮಂದಿರ ಎಂದಾದಲ್ಲಿ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಇರಬೇಕಾಗುತ್ತದೆ. ಸಮುಚ್ಚಯ ಭವನಕ್ಕೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಇದೆ. ಜಾಲತಾಣದಲ್ಲಿ ಮಾಹಿತಿ ಇಲ್ಲದಿದ್ದಲ್ಲಿ ಪರಿಶೀಲಿಸಿ, ಸೇರಿಸಲಾಗುತ್ತದೆ. ದುರಸ್ತಿ ಕೆಲಸ ಶೇ 95 ರಷ್ಟು ಪೂರ್ಣಗೊಂಡಿದೆ. ಬಾಕಿ ಕೆಲಸವನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುತ್ತದೆ’ ಎಂದು ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.