ಬೆಂಗಳೂರು: ನಿಟ್ಟೂರು ಮತ್ತು ಸಂಪಿಗೆ ನಡುವಿನ ಲೆವೆಲ್ ಕ್ರಾಸಿಂಗ್–64ರಲ್ಲಿ ಸಿಮೆಂಟ್ ತೊಲೆ (ಗರ್ಡರ್) ಅಳವಡಿಕೆ ಮತ್ತು ತೆಗೆದು ಹಾಕುವ ನಿರ್ವಹಣಾ ಕಾರ್ಯಕ್ಕಾಗಿ ಆ.8 ಮತ್ತು 15ರಂದು ರೈಲುಗಳ ಸಂಚಾರವನ್ನು ರದ್ದುಪಡಿಸಲು ನಿರ್ಧರಿಸಲಾಗಿತ್ತು. ಇದೀಗ ನಿರ್ವಹಣಾ ಕಾರ್ಯವನ್ನು ಮುಂದಕ್ಕೆ ಹಾಕಿರುವುದರಿಂದ ಅಂದು ಯಾವುದೇ ರೈಲುಗಳ ವ್ಯತ್ಯಯ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ರದ್ದು ಮಾಡಲಾಗಿದ್ದ ತುಮಕೂರು-ಚಾಮರಾಜನಗರ ಪ್ಯಾಸೆಂಜರ್ ರೈಲು, ಚಾಮರಾಜನಗರ-ಮೈಸೂರು ಪ್ಯಾಸೆಂಜರ್, ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್, ತುಮಕೂರು-ಕೆಎಸ್ಆರ್ ಬೆಂಗಳೂರು-ತುಮುಕೂರು ಮೆಮು, ಯಶವಂತಪುರ-ಶಿವಮೊಗ್ಗ–ಯಶವಂತಪರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಎಂದಿನಂತೆ ಸಂಚರಿಸಲಿದೆ.
ಭಾಗಶಃ ರದ್ದು ಮಾಡಲಾಗಿದ್ದ ಕೆಎಸ್‌ಆರ್ ಬೆಂಗಳೂರು-ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು, ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್, ಧಾರವಾಡ-ಕೆಎಸ್‌ಆರ್ ಬೆಂಗಳೂರು–ಧಾರವಾಡ ಸಿದ್ದಗಂಗಾ ಎಕ್ಸ್‌ಪ್ರೆಸ್ ರೈಲು ಎಂದಿನಂತೆ ಇರಲಿದೆ.
ಮಾರ್ಗ ಬದಲಾಯಿಸಲಾಗಿದ್ದ ವಾಸ್ಕೋಡ ಗಾಮಾ-ಯಶವಂತಪುರ ಎಕ್ಸ್‌ಪ್ರೆಸ್, ಮೈಸೂರು-ವಾರಾಣಸಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಯಶವಂತಪುರ-ಜೈಪುರ ಎಕ್ಸ್‌ಪ್ರೆಸ್, ಮೈಸೂರು-ಉದಯಪುರ ಸಿಟಿ ಎಕ್ಸ್‌ಪ್ರೆಸ್, ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್ ರೈಲು ಎಂದಿನಂತೆ ಸಾಮಾನ್ಯ ಮಾರ್ಗದಲ್ಲಿ ಸಂಚರಿಸಲಿವೆ.
ಇದೇ ರೀತಿ ಮಾರ್ಗ ಮಧ್ಯೆಯೇ ಕೆಲವು ನಿಮಿಷಗಳಷ್ಟು ನಿಯಂತ್ರಿಸಲಾಗಿದ್ದ ರೈಲುಗಳು, ಮರು ನಿಗದಿಪಡಿಸಲಾದ ರೈಲುಗಳು ಎಂದಿನ ವೇಳಾಪಟ್ಟಿಯಂತೆಯೇ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.