ಬೆಂಗಳೂರು: ನಗರದ ಹಲವು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಇಮ್ರಾನ್ ಪಾಷಾ (26) ಎಂಬುವವರನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಕೆ.ಆರ್. ಪುರ ನಿವಾಸಿ ಇಮ್ರಾನ್ ಪಾಷಾ, ಗುಜರಿ ವ್ಯಾಪಾರಿ. ಗುಜರಿ ವಸ್ತುಗಳನ್ನು ಖರೀದಿಸಲು ನಗರದ ಹಲವೆಡೆ ಹಗಲಿನಲ್ಲಿ ಸುತ್ತಾಡುತ್ತಿದ್ದರು. ಅದೇ ವೇಳೆ ಮನೆಗಳಲ್ಲಿ ಗುರುತಿಸಿ, ನಸುಕಿನಲ್ಲಿ ಹಾಗೂ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು. ಆರೋಪಿಯಿಂದ ₹ 8.50 ಲಕ್ಷ ಮೌಲ್ಯದ 147 ಗ್ರಾಂ ಚಿನ್ನಾಭರಣ, 1 ಕೆ.ಜಿ 517 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಗೋವಿಂದರಾಜನಗರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಜ. 10ರಂದು ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದರು’ ಎಂದರು.
ಐಷಾರಾಮಿ ಜೀವನ: ‘ಆರೋಪಿ ಇಮ್ರಾನ್ ಪಾಷಾ, ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಿದ್ದರು. ಕುಟುಂಬದ ಐಷಾರಾಮಿ ಜೀವನಕ್ಕೆ ಗುಜರಿ ವ್ಯಾಪಾರದಿಂದ ಬರುತ್ತಿದ್ದ ಹಣ ಸಾಲುತ್ತಿರಲಿಲ್ಲ. ಹೀಗಾಗಿ, ಇಮ್ರಾನ್ ಪಾಷಾ ಕಳ್ಳತನಕ್ಕೆ ಇಳಿದಿದ್ದರು’ ಎಂದು ಪೊಲೀಸರು ಹೇಳಿದರು.
‘ಆರೋಪಿ, ಪತ್ನಿಯನ್ನು ತಿಂಗಳಿಗೊಮ್ಮೆ ಹೊರ ರಾಜ್ಯಗಳಿಗೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದರು. ಐಷಾರಾಮಿ ಹಾಗೂ ಬೆಲೆಬಾಳುವ ವಸ್ತುಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದರು. ಅದಕ್ಕೆ ಬೇಕಾದ ಹಣವನ್ನು ಕಳ್ಳತನದಿಂದ ಹೊಂದಿಸುತ್ತಿದ್ದರು. ಇತ್ತೀಚೆಗೆ ಪತ್ನಿಯನ್ನು ಕಾಶ್ಮೀರಕ್ಕೆ ಪ್ರವಾಸಕ್ಕೆ ಕರೆದೊಯ್ದಿದ್ದರು. ಹಣ ಖಾಲಿಯಾಗುತ್ತಿದ್ದಂತೆ ಬೆಂಗಳೂರಿಗೆ ವಾಪಸು ಕರೆತಂದಿದ್ದರು’ ಎಂದೂ ತಿಳಿಸಿದರು.
‘ಮಹದೇವಪುರ, ಅಶೋಕನಗರ, ಕೆ.ಆರ್. ಪುರ ಹಾಗೂ ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಕಳ್ಳತನ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿದರು.
‘ಗೋಡೆ ಹಾಗೂ ಬಾಗಿಲುಗಳಿಗೆ ಕಿಂಡಿ’
‘ತಮ್ಮ ಮನೆಯ ಗೋಡೆ ಹಾಗೂ ಬಾಗಿಲುಗಳಲ್ಲಿ ಆರೋಪಿ ಸಣ್ಣ ಕಿಂಡಿ ಕೊರೆದಿದ್ದರು. ತಮ್ಮನ್ನು ಬಂಧಿಸಲು ಪೊಲೀಸರು ಮನೆಗೆ ಬಂದರೆ, ಕಿಂಡಿ ಮೂಲಕವೇ ಗಮನಿಸಿ ಪರಾರಿಯಾಗುವುದು ಆರೋಪಿ ಉದ್ದೇಶವಾಗಿತ್ತು. ಆರೋಪಿ ಬಂಧಿಸಿದ ನಂತರ, ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಕಿಂಡಿಗಳು ಇರುವುದು ಪತ್ತೆಯಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.